ತಫ್ಸೀರ್ (ಕುರ್‌ಆನ್ ವ್ಯಾಖ್ಯಾನ) ವಿಭಾಗ
ಉತ್ತರ: ಸೂರ ಅಲ್-ಫಾತಿಹಾ ಮತ್ತು ಅದರ ವ್ಯಾಖ್ಯಾನ:
ಪರಮ ದಯಾಮಯನೂ ಕರುಣಾನಿಧಿಯೂ ಆಗಿರುವ ಅಲ್ಲಾಹನ ನಾಮದಿಂದ. ಸರ್ವಲೋಕಗಳ ಪರಿಪಾಲಕನಾಗಿರುವ ಅಲ್ಲಾಹುವಿಗೆ ಸ್ತುತಿ. ಪರಮ ದಯಾಳು, ಕರುಣಾನಿಧಿ ಪ್ರತಿಫಲ ದಿನದ ಒಡೆಯ. ನಾವು ನಿನ್ನನ್ನು ಮಾತ್ರ ಆರಾಧಿಸುವೆವು. ನಾವು ನಿನ್ನೊಂದಿಗೆ ಮಾತ್ರ ಸಹಾಯವನ್ನು ಬೇಡುವೆವು. ನಮ್ಮನ್ನು ನೇರವಾದ ಮಾರ್ಗದಲ್ಲಿ ಮುನ್ನಡೆಸು. ನೀನು ಅನುಗ್ರಹಿಸಿದವರ ಮಾರ್ಗದಲ್ಲಿ; ಕ್ರೋಧಕ್ಕೆ ಪಾತ್ರರಾದವರ ಮಾರ್ಗದಲ್ಲಲ್ಲ. ಪಥಭ್ರಷ್ಟರಾದವರ ಮಾರ್ಗದಲ್ಲೂ ಅಲ್ಲ. [ಸೂರ ಅಲ್-ಫಾತಿಹ: 1- 7].
ತಫ್ಸೀರ್ (ವಿವರಣೆ).
ಇದನ್ನು ಸೂರ ಅಲ್-ಫಾತಿಹ ಎಂದು ಕರೆದಿರುವುದು ಏಕೆಂದರೆ ಇದರೊಂದಿಗೆ ಅಲ್ಲಾಹನ ಗ್ರಂಥ ಆರಂಭವಾಗುತ್ತದೆ.
{بِسۡمِ ٱللَّهِ ٱلرَّحۡمَٰنِ ٱلرَّحِيمِ} بِسْمِ اللَّهِ الرَّحْمَنِ الرَّحِيمِ) 1) (ಪರಮ ದಯಾಮಯನೂ ಕರುಣಾನಿಧಿಯೂ ಆಗಿರುವ ಅಲ್ಲಾಹನ ನಾಮದಿಂದ) ಅಲ್ಲಾಹನ ಹೆಸರಿನಲ್ಲಿ ನಾನು ಕುರ್‌ಆನ್ ಓದಲು ಪ್ರಾರಂಭಿಸುತ್ತೇನೆ. ಅವನ ಹೆಸರನ್ನು ಪ್ರಸ್ತಾಪಿಸುವ ಮೂಲಕ ಸಹಾಯಯಾಚಿಸುತ್ತಾ ಆತನ ಸಮೃದ್ಧಿ ಬಯಸುತ್ತೇನೆ.
(الله) (ಅಲ್ಲಾಹು) ಸತ್ಯ ಆರಾಧ್ಯ. ಅವನಲ್ಲದೆ ಬೇರೆ ಯಾರನ್ನೂ ಈ ಹೆಸರಿನಿಂದ ಕರೆಯಲಾಗುವುದಿಲ್ಲ.
(الرَّحْمَن) ದಯಾಳು, ಕರುಣಾಮಯಿ: ಅಂದರೆ: ವಿಶಾಲವಾದ ಕರುಣೆ; ಅವನ ಕರುಣೆಯು ಎಲ್ಲಾ ವಸ್ತುಗಳನ್ನು ಆವರಿಸಿದೆ.
(الرَّحِيم)ಕರುಣಾಮಯಿ: ಅಂದರೆ ವಿಶ್ವಾಸಿಗಳೊಂದಿಗೆ ವಿಶೇಷ ಕರುಣೆಯುಳ್ಳವನು.
{ٱلۡحَمۡدُ لِلَّهِ رَبِّ ٱلۡعَٰلَمِينَ} 2- ( الْحَمْدُ لِلَّهِ رَبِّ الْعَالَمِينَ ) ಸರ್ವಲೋಕಗಳ ಪರಿಪಾಲಕನಾಗಿರುವ ಅಲ್ಲಾಹುವಿಗೆ ಸ್ತುತಿ. ಅಂದರೆ ಎಲ್ಲಾ ರೀತಿಯ ಸ್ತುತಿ ಮತ್ತು ಪರಿಪೂರ್ಣತೆ ಅಲ್ಲಾಹನಿಗೆ ಮಾತ್ರ ಸೀಮಿತ.
{ٱلرَّحۡمَٰنِ ٱلرَّحِيمِ} 3- (الرَّحْمَنِ الرَّحِيمِ) ಪರಮ ದಯಾಳು, ಕರುಣಾಮಯಿ. ಅಂದರೆ, ಅವನ ದಯೆ ಎಲ್ಲವನ್ನೂ ಆವರಿಸಿದೆ ಮತ್ತು ಅವನ ಕರುಣೆ ವಿಶ್ವಾಸಿಗಳಿಗೆ ತಲುಪುವುದು.
{مَٰلِكِ يَوۡمِ ٱلدِّينِ} 4- (مَالِكِ يَوْمِ الدِّينِ) ಪ್ರತಿಫಲ ದಿನದ ಒಡೆಯ. ಅದು ಪುನರುತ್ಥಾನದ ದಿನ.
{إِيَّاكَ نَعۡبُدُ وَإِيَّاكَ نَسۡتَعِينُ} 5- (إِيَّاكَ نَعْبُدُ وَإِيَّاكَ نَسْتَعِينُ) ಅಂದರೆ ನಾವು ನಿನ್ನನ್ನು ಮಾತ್ರ ಆರಾಧಿಸುವೆವು. ನಾವು ನಿನ್ನೊಂದಿಗೆ ಮಾತ್ರ ಸಹಾಯವನ್ನು ಬೇಡುವೆವು.
{ٱهۡدِنَا ٱلصِّرَٰطَ ٱلۡمُسۡتَقِيمَ} 6- ( اهْدِنَا الصِّرَاطَ الْمُسْتَقِيمَ) ನಮ್ಮನ್ನು ನೇರವಾದ ಮಾರ್ಗದಲ್ಲಿ ಮುನ್ನಡೆಸು. ಅಂದರೆ ಅದು ಇಸ್ಲಾಂ ಮತ್ತು ಸುನ್ನತ್ತಿನೆಡೆಗೆ ಮಾರ್ಗದರ್ಶನ.
{صِرَٰطَ ٱلَّذِينَ أَنۡعَمۡتَ عَلَيۡهِمۡ غَيۡرِ ٱلۡمَغۡضُوبِ عَلَيۡهِمۡ وَلَا ٱلضَّآلِّينَ} 7- ( صِرَاطَ الَّذِينَ أَنْعَمْتَ عَلَيْهِمْ غَيْرِ الْمَغْضُوبِ عَلَيْهِمْ وَلَا الضَّالِّينَ ) ನೀನು ಅನುಗ್ರಹಿಸಿದವರ ಮಾರ್ಗದಲ್ಲಿ; ಕ್ರೋಧಕ್ಕೆ ಪಾತ್ರರಾದವರ ಮಾರ್ಗದಲ್ಲಲ್ಲ. ಪಥಭ್ರಷ್ಟರಾದವರ ಮಾರ್ಗದಲ್ಲೂ ಅಲ್ಲ. ಅಂದರೆ ಅಂಬಿಯಾಗಳ ಮತ್ತು ಸಲಫುಸ್ಸಾಲಿಹೀನರ ಮಾರ್ಗದಲ್ಲಿ ಯಹೋದರು ಮತ್ತು ಕ್ರೈಸ್ತರ ಮಾರ್ಗದಲ್ಲಲ್ಲ.
- ಇದನ್ನು ಓದಿದ ನಂತರ ಆಮೀನ್ ಹೇಳುವುದು ಸುನ್ನತ್ತಾಗಿದೆ: (آمين) ಅರ್ಥ: ನಮಗೆ ಉತ್ತರ ಕೊಡು.
ಉತ್ತರ: ಸೂರ ಅಝ್ಝಲ್‌ಝಲ ಮತ್ತು ಅದರ ವ್ಯಾಖ್ಯಾನ:
ಪರಮ ದಯಾಮಯನೂ ಕರುಣಾನಿಧಿಯೂ ಆಗಿರುವ ಅಲ್ಲಾಹುವಿನ ನಾಮದಿಂದ.
ಭೂಮಿಯನ್ನು ಕಂಪಿಸಲಾಗುವಾಗ. ಅದರ ಭಯಾನಕವಾದ ಆ ಕಂಪನ. ಭೂಮಿಯು ಅದರ ಭಾರಗಳನ್ನು ಹೊರ ತಳ್ಳುವಾಗ ಮತ್ತು ‘ಅದಕ್ಕೇನಾಯಿತು?’ ಎಂದು ಮನುಷ್ಯನು ಹೇಳುವಾಗ ಆ ದಿನದಂದು ಅದು (ಭೂಮಿಯು) ತನ್ನ ವೃತ್ತಾಂತಗಳನ್ನು ತಿಳಿಸಿಕೊಡುವುದು. ತಮ್ಮ ಪ್ರಭು ಅದಕ್ಕೆ ಸಂದೇಶ ನೀಡಿದ ನಿಮಿತ್ತ. ಅಂದು ಮನುಷ್ಯರಿಗೆ ಅವರ ಕರ್ಮಗಳನ್ನು ತೋರಿಸಲಾಗುವುದಕ್ಕಾಗಿ ಅವರು ಹಲವು ಗುಂಪುಗಳಾಗಿ ಹೊರಡುವರು. ಆಗ ಯಾರು ಒಂದು ಅಣುವಿನ ತೂಕದಷ್ಟು ಒಳಿತು ಮಾಡಿರುವನೋ ಅವನು ಅದನ್ನು ಕಾಣುವನು. ಯಾರು ಒಂದು ಅಣುವಿನ ತೂಕದಷ್ಟು ಕೆಡುಕು ಮಾಡಿರುವನೋ ಅವನು ಅದನ್ನು ಕಾಣುವನು. [ಸೂರ ಅಝ್ಝಲ್‌ಝಲ:1- 8].
ತಫ್ಸೀರ್ (ವಿವರಣೆ).
{إِذَا زُلۡزِلَتِ ٱلۡأَرۡضُ زِلۡزَالَهَا} 1- ( إِذَا زُلْزِلَتِ الْأَرْضُ زِلْزَالَهَا ) ಭೂಮಿಗೆ ತೀವ್ರ ಕಂಪನದಿಂದ ಕಂಪಿಸಿದಾಗ. ಇದು ಪುನರುತ್ಥಾನ ದಿನ ಸಂಭವಿಸುತ್ತದೆ.
{وَأَخۡرَجَتِ ٱلۡأَرۡضُ أَثۡقَالَهَا} 2- (وَأَخْرَجَتِ الْأَرْضُ أَثْقَالَهَا) ಭೂಮಿ ಅದರೊಳಗಿರುವ ಶವಗಳನ್ನು ಹಾಗೂ ಇತರ ವಸ್ತುಗಳನ್ನು ಹೊರ ಹಾಕುವಾಗ.
{وَقَالَ ٱلۡإِنسَٰنُ مَا لَهَا} 3- (وَقَالَ الْإِنْسَانُ مَا لَهَا) ಮನುಷ್ಯನು ಆಶ್ಚರ್ಯಚಕಿತನಾಗಿ ಹೇಳುವನು: ಭೂಮಿಗೆ ಏನಾಗಿದೆ ಇದೇಕೆ ಚಲಿಸುತ್ತಾ ಕಂಪಿಸುತ್ತಿದೆ?!
{يَوۡمَئِذٖ تُحَدِّثُ أَخۡبَارَهَا} 4- (يَوْمَئِذٍ تُحَدِّثُ أَخْبَارَهَا ) ಆ ಮಹಾನ್ ದಿನದಂದು ಭೂಮಿಯು ಅದರ ಮೇಲೆ ಮಾಡಿದ ಒಳಿತು ಮತ್ತು ಕೆಡುಕಿನ ಬಗ್ಗೆ ಹೇಳುವುದು.
{بِأَنَّ رَبَّكَ أَوۡحَىٰ لَهَا} 5- ( بِأَنَّ رَبَّكَ أَوْحَى لَهَا ) ಏಕೆಂದರೆ ಭೂಮಿ ಅದನ್ನು ತಿಳಿಯುವಂತೆ ಅಲ್ಲಾಹು ಮಾಡಿದ್ದಾನೆ ಮತ್ತು ಅದನ್ನು ತಿಳಿಸಬೇಕೆಂದು ಆಜ್ಞಾಪಿಸಿದ್ದಾನೆ.
{يَوۡمَئِذٖ يَصۡدُرُ ٱلنَّاسُ أَشۡتَاتٗا لِّيُرَوۡاْ أَعۡمَٰلَهُمۡ} 6- ( يَوْمَئِذٍ يَصْدُرُ النَّاسُ أَشْتَاتًا لِيُرَوْا أَعْمَالَهُمْ ) ಅಂದು ಮನುಷ್ಯರಿಗೆ ಅವರ ಕರ್ಮಗಳನ್ನು ತೋರಿಸಲಾಗುವುದಕ್ಕಾಗಿ ಅವರು ಹಲವು ಗುಂಪುಗಳಾಗಿ ಹೊರಡುವರು. ಆ ಮಹಾನ್ ದಿನದಂದು, ಭೂಮಿಯು ನಡುಗುತ್ತದೆ, ಜನರು ತಾವು ಇಹಲೋಕದಲ್ಲಿ ಮಾಡಿದ ಕರ್ಮಗಳನ್ನು ವೀಕ್ಷಿಸಲು ತಂಡಗಳಾಗಿ ವಿಚಾರಣೆಯ ಸ್ಥಾನದಿಂದ ಹೊರಬರುತ್ತಾರೆ.
{فَمَن يَعۡمَلۡ مِثۡقَالَ ذَرَّةٍ خَيۡرٗا يَرَهُۥ} "7- ( فَمَنْ يَعْمَلْ مِثْقَالَ ذَرَّةٍ خَيْرًا يَرَهُ ) ಆಗ ಯಾರು ಒಂದು ಅಣುವಿನ ತೂಕದಷ್ಟು ಒಳಿತು ಮಾಡಿರುವನೋ ಅವನು ಅದನ್ನು ಕಾಣುವನು. ಯಾರು ಸಣ್ಣ ಇರುವೆಯ ತೂಕದಷ್ಟು ಒಳಿತು ಮತ್ತು ಸದಾಚಾರವನ್ನು ಮಾಡುತ್ತಾನೋ ಅವನು ಅವನ ಮುಂದೆ ಅದನ್ನು ಕಾಣುವನು."
{وَمَن يَعۡمَلۡ مِثۡقَالَ ذَرَّةٖ شَرّٗا يَرَهُۥ} "8- ( فَمَنْ يَعْمَلْ مِثْقَالَ ذَرَّةٍ خَيْرًا يَرَهُ ) ಆಗ ಯಾರು ಒಂದು ಅಣುವಿನ ತೂಕದಷ್ಟು ಕೆಡುಕು ಮಾಡಿರುವನೋ ಅವನು ಅದನ್ನು ಕಾಣುವನು. ಯಾರು ಕೆಡುಕನ್ನು ಮಾಡುತ್ತಾನೋ ಅವನು ಅವನ ಮುಂದೆ ಅದನ್ನು ಕಾಣುವನು."
ಉತ್ತರ: ಸೂರ ಅಲ್-ಆದಿಯಾತ್ ಮತ್ತು ಅದರ ವ್ಯಾಖ್ಯಾನ:
ಪರಮ ದಯಾಮಯನೂ ಕರುಣಾನಿಧಿಯೂ ಆಗಿರುವ ಅಲ್ಲಾಹನ ನಾಮದಿಂದ.
ಬುಸುಗುಡುತ್ತ ಓಡುವವುಗಳ (ಕುದುರೆಗಳ) ಆಣೆ ಅವು (ತಮ್ಮ ಗೊರಸುಗಳಿಂದ) ಕಿಡಿಗಳನ್ನು ಹಾರಿಸುತ್ತವೆ ಅನಂತರ ಪ್ರಾತಃಕಾಲದಲ್ಲಿ ಆಕ್ರಮಣ ನಡೆಸುತ್ತವೆ ಆಗ ಅವು ಧೂಳೆಬ್ಬಿಸುತ್ತವೆ ತರುವಾಯ ಇದೇ ಸ್ಥಿತಿಯಲ್ಲಿ ಯಾವುದಾದರೂ ಜನ ಸಮೂಹದೊಳಕ್ಕೆ ನುಗ್ಗಿ ಬಿಡುತ್ತವೆ ವಾಸ್ತವದಲ್ಲಿ ಮಾನವನು ತನ್ನ ಪ್ರಭುವಿಗೆ ಬಹಳ ಕೃತಘ್ನನಾಗಿದ್ದಾನೆ. ಮತ್ತು ಇದಕ್ಕೆ ಸ್ವತಃ ಅವನೇ ಸಾಕ್ಷಿಯಾಗಿದ್ದಾನೆ. ಅವನು ಧನ ಕನಕಗಳ ಅತಿಯಾದ ಮೋಹದಲ್ಲಿ ಸಿಲುಕಿ ಕೊಂಡಿದ್ದಾನೆ. ಸಮಾಧಿಗಳೊಳಗೆ (ದಫನವಾಗಿ) ಇರುವ ಸಕಲವನ್ನೂ ಹೊರ ತೆಗೆಯಲಾಗುವ ಆ ಸಂದರ್ಭವನ್ನು ಅವನು ಅರಿತಿಲ್ಲವೇ? ಮತ್ತು ಹೃದಯಗಳೊಳಗೆ (ಅಡಗಿ) ಇರುವ ಎಲ್ಲವನ್ನೂ ಹೊರತೆಗೆದು ವಿಚಾರಣೆಗೊಳಪಡಿಸಲಾಗುವ (ಆ ಸಂದರ್ಭ) ಖಂಡಿತವಾಗಿಯೂ ಅಂದು ಅವರ ಪ್ರಭು ಅವರನ್ನು ಪೂರ್ಣವಾಗಿ ತಿಳಿದವನಾಗಿರುವನು. [ಸೂರ ಅಲ್-ಆದಿಯಾತ್:1- 11].
ತಫ್ಸೀರ್ (ವಿವರಣೆ).
{وَٱلۡعَٰدِيَٰتِ ضَبۡحٗا} 1- ( وَالْعَادِيَاتِ ضَبْحًا ) ಬುಸುಗುಡುತ್ತ ಓಡುವ ಕುದುರೆಗಳ ಆಣೆ. ಅಲ್ಲಾಹು ಇಲ್ಲಿ ಕುದುರೆಗಳ ಮೇಲೆ ಆಣೆ ಹಾಕಿದ್ದಾನೆ. ಅವುಗಳ ಓಟದ ತೀವ್ರತೆಯಿಂದ ಅದರ ಶಬ್ದವನ್ನು ಕೇಳಬಹುದು.
{فَٱلۡمُورِيَٰتِ قَدۡحٗا} 2- ( فَالْمُورِيَاتِ قَدْحًا ) ಅವು (ತಮ್ಮ ಗೊರಸುಗಳಿಂದ) ಕಿಡಿಗಳನ್ನು ಹಾರಿಸುತ್ತವೆ. ತಮ್ಮ ಕಾಲುಗಳ ಗೊರಸುಗಳಿಂದ ಬೆಂಕಿ ಕಿಡಿಗಳನ್ನು ಹಾರಿಸುವ ಕುದುರೆಗಳ ಮೇಲೆ ಆಣೆ ಹಾಕಿದ್ದಾನೆ. ಅವುಗಳ ಓಟದ ತೀವ್ರತೆಯಿಂದ ಗೊರಸುಗಳು ಕಲ್ಲಿಗೆ ತಾಗುವಾಗ ಬೆಂಕಿ ಕಿಡಿ ಹಾರುತ್ತವೆ.
{فَٱلۡمُغِيرَٰتِ صُبۡحٗا} 3- (فَالْمُغِيرَاتِ صُبْحًا) ಪ್ರಭಾತದಲ್ಲಿ ವೈರಿಗಳ ಮೇಲೆ ಆಕ್ರಮಣ ಮಾಡುವ ಕುದುರೆಗಳ ಮೇಲೆ ಆಣೆ ಮಾಡಲಾಗಿದೆ.
{فَأَثَرۡنَ بِهِۦ نَقۡعٗا} 4- (فَأَثَرْنَ بِهِ نَقْعًا) ಅವು ಓಡುವಾಗ ಧೂಳಿಯನ್ನು ಎಬ್ಬಿಸುತ್ತವೆ.
{فَوَسَطۡنَ بِهِۦ جَمۡعًا} 5- (فَوَسَطْنَ بِهِ جَمْعًا) ಅವು ತಮ್ಮ ಮೇಲೆ ಸವಾರಿ ಮಾಡುವ ಯೋಧರೊಂದಿಗೆ ಶತ್ರುಗಳ ನಡುವಿಗೆ ಧುಮುಕುತ್ತವೆ.
{إِنَّ ٱلۡإِنسَٰنَ لِرَبِّهِۦ لَكَنُودٞ} 6- (إِنَّ الْإِنْسَانَ لِرَبِّهِ لَكَنُودٌ) ಅಲ್ಲಾಹು ಮನುಷ್ಯನಿಗೆ ಕೊಡಬೇಕೆಂದು ಆದೇಶಿಸುವ ಒಳಿತನ್ನು ಅವನು ಕೊಡದೆ ತಡೆಹಿಡಿಯುತ್ತಾನೆ.
{وَإِنَّهُۥ عَلَىٰ ذَٰلِكَ لَشَهِيدٞ} 7- (وَإِنَّهُ عَلَى ذَلِكَ لَشَهِيدٌ) ಅವನು ಸ್ವತಃ ಆ ಒಳಿತನ್ನು ತಡೆಹಿಡಿಯುವುದಕ್ಕೆ ಸಾಕ್ಷಿಯಾಗಿದ್ದಾನೆ. ಅದು ಅತ್ಯಂತ ಸ್ಪಷ್ಟವಾಗಿರುವುದರಿಂದ ಅದನ್ನು ನಿರಾಕರಿಸಲು ಅವನಿಗೆ ಸಾಧ್ಯವಿಲ್ಲ.
{وَإِنَّهُۥ لِحُبِّ ٱلۡخَيۡرِ لَشَدِيدٌ} 8- (وَإِنَّهُ لِحُبِّ الْخَيْرِ لَشَدِيدٌ) ಅವನಿಗೆ ಧನದ ಮೇಲೆ ಅತಿಯಾದ ಮೋಹವಿರುವುದರಿಂದ ಅವನು ಜಿಪುಣನಾಗಿದ್ದಾನೆ.
{أَفَلَا يَعۡلَمُ إِذَا بُعۡثِرَ مَا فِي ٱلۡقُبُورِ} 9- (أَفَلَا يَعْلَمُ إِذَا بُعْثِرَ مَا فِي الْقُبُورِ) ಇಹಲೋಕಕ್ಕೆ ಮರುಳಾದ ಈ ಮನುಷ್ಯನಿಗೆ, ಸಮಾಧಿಗಳಲ್ಲಿರುವವರನ್ನು ಅಲ್ಲಾಹು ಜೀವಂತ ಎಬ್ಬಿಸುವಾಗ ಮತ್ತು ಅವರನ್ನು ವಿಚಾರಣೆ ಮಾಡಿ ಅವರಿಗೆ ಪ್ರತಿಫಲ ನೀಡಲು ಅವರನ್ನು ಭೂಮಿಯಿಂದ ಹೊರತರುವಾಗ ವಿಷಯವು ಅವನು ಭಾವಿಸಿದಂತಿಲ್ಲ ಎಂದು ಮನುಷ್ಯನಿಗೆ ತಿಳಿಯುವುದಿಲ್ಲವೇ?!
{وَحُصِّلَ مَا فِي ٱلصُّدُورِ} 10- (وَحُصِّلَ مَا فِي الصُّدُورِ) ಹೃದಯಗಳಲ್ಲಿರುವ ಉದ್ದೇಶಗಳು, ವಿಶ್ವಾಸಗಳು ಮುಂತಾದವುಗಳನ್ನು ಬಹಿರಂಗಪಡಿಸುವಾಗ.
{إِنَّ رَبَّهُم بِهِمۡ يَوۡمَئِذٖ لَّخَبِيرُۢ} 11- (إِنَّ رَبَّهُمْ بِهِمْ يَوْمَئِذٍ لَخَبِيرٌ) ಆ ದಿನ ಅಲ್ಲಾಹು ಅವರ ಬಗ್ಗೆ ಸೂಕ್ಷ್ಮ ಜ್ಞಾನವನ್ನು ಹೊಂದಿರುವನು. ಅವನ ದಾಸರ ಯಾವುದೇ ವಿಷಯವೂ ಅವನಿಗೆ ತಿಳಿಯದೇ ಇರುವುದಿಲ್ಲ. ಅದರ ಆಧಾರದಲ್ಲೇ ಅವನು ಅವರಿಗೆ ಪ್ರತಿಫಲ ನೀಡುತ್ತಾನೆ.
ಉತ್ತರ: ಸೂರ ಅಲ್-ಕಾರಿಅ ಮತ್ತು ಅದರ ವ್ಯಾಖ್ಯಾನ:
ಪರಮ ದಯಾಮಯನೂ ಕರುಣಾನಿಧಿಯೂ ಆಗಿರುವ ಅಲ್ಲಾಹುವಿನ ನಾಮದಿಂದ.
ಭಯಾನಕವಾದ ಆ ಘಟನೆ!ತತತ ಭಯಾನಕವಾದ ಆ ಘಟನೆ ಎಂದರೇನು? ಭಯಾನಕವಾದ ಆ ಘಟನೆ ಎಂದರೇನು ಅಂದು ಜನರು ಚದುರಿದ ಹಾತೆಗಳಂತಾಗುವರು ಮತ್ತು ಪರ್ವತಗಳು ಬಣ್ಣ ಬಣ್ಣದ ಹಿಂಜಿದ ಉಣ್ಣೆಯಂತಾಗಿ ಬಿಡುವುದು. ತರುವಾಯ ಯಾರ ತೂಕದ ತಟ್ಟೆಗಳು ಭಾರವಾಗಿರುವುವೋ ಅವನು ಮನೋಹರವಾದ ಸುಖಭೋಗದಲ್ಲಿರುವನು. ಮತ್ತು ಯಾರ ತೂಕದ ತಟ್ಟೆಗಳು ಹಗುರವಾಗಿರುವುವೋ ಅವನ ನಿವಾಸವು ಆಳವಾದ ಹೊಂಡವಾಗಿರುವುದು. ಅದೇನೆಂದು ನಿಮಗೇನು ಗೊತ್ತು? ಧಗಧಗಿಸುವ ಅಗ್ನಿಯದು. [ಸೂರ ಅಲ್-ಕಾರಿಅ:1- 11].
ತಫ್ಸೀರ್ (ವಿವರಣೆ).
{ٱلۡقَارِعَةُ} 1. {ಅಲ್-ಕಾರಿಅ} ಎಂದರೆ ಜನರ ಹೃದಯಕ್ಕೆ ಬಡಿಯುವ ಪ್ರಳಯ. ಇದರಿಂದಾಗಿ ಜನರ ಹೃದಯಗಳಲ್ಲಿ ಭಯಾನಕತೆ ಉಂಟಾಗುತ್ತದೆ.
{مَا ٱلۡقَارِعَةُ} 2. {ಮಲ್-ಕಾರಿಅ} ಅತ್ಯಂತ ಭಯಾನಕವಾಗಿರುವ, ಜನರ ಹೃದಯಕ್ಕೆ ಬಡಿಯುವ ಪ್ರಳಯ ಎಂದರೇನು?
{وَمَآ أَدۡرَىٰكَ مَا ٱلۡقَارِعَةُ} 3. {ವಮಾ ಅದ್ರಾಕ ಮಲ್ ಕಾರಿಅ}: ಓ ಪ್ರವಾದಿಯವರೇ! ಅತ್ಯಂತ ಭಯಾನಕವಾಗಿರುವ, ಜನರ ಹೃದಯಕ್ಕೆ ಬಡಿಯುವ ಈ ಪ್ರಳಯ ಎಂದರೇನೆಂದು ನಿಮಗೇನು ಗೊತ್ತು? ಖಂಡಿತವಾಗಿಯೂ ಅದು ಪುನರುತ್ಥಾನದ ದಿನ.
{يَوۡمَ يَكُونُ ٱلنَّاسُ كَٱلۡفَرَاشِ ٱلۡمَبۡثُوثِ} 4. {ಯೌಮ ಯಕೂನು ನ್ನಾಸು ಕಲ್ ಫರಾಶಿಲ್ ಮಬ್ಸೂಸ್}: ಅದು ಜನರ ಹೃದಯವನ್ನು ಬಡಿಯುವ ದಿನದಂದು ಅವರು ಚದುರಿದ ಪತಂಗಗಳಂತೆ ಅಲ್ಲಿ ಇಲ್ಲಿ ಬಿದ್ದಿರುತ್ತಾರೆ.
{وَتَكُونُ ٱلۡجِبَالُ كَٱلۡعِهۡنِ ٱلۡمَنفُوشِ} 5. {ವ ತಕೂನುಲ್ ಜಿಬಾಲು ಕಲ್ ಇಹ್ನಿಲ್ ಮನ್‌ಫೂಶ್}: ಅಂದು ಪರ್ವತಗಳು ತಮ್ಮ ಭಾರವನ್ನು ಕಳೆದುಕೊಂಡ ಹಿಂಜಿದ ಉಣ್ಣೆಯಂತೆ ಹಾರಾಡುತ್ತವೆ.
{فَأَمَّا مَن ثَقُلَتۡ مَوَٰزِينُهُۥ} 6. {ಫಅಮ್ಮಾ ಮನ್ ಸಕುಲತ್ ಮಾವಾಝೀನುಹ್}: ಯಾರ ಸತ್ಕರ್ಮಗಳು ಅವನ ದುಷ್ಕರ್ಮಗಳಿಗಿಂತ ಹೆಚ್ಚು ಭಾರವಾಗುತ್ತದೋ.
{فَهُوَ فِي عِيشَةٖ رَّاضِيَةٖ} 7. {ಫಹುವ ಫೀ ಈಶತಿ ರ್‍ರಾದಿಯ}: ಅವನು ಸ್ವರ್ಗದಲ್ಲಿ ಆಹ್ಲಾದಕರ ಜೀವನವನ್ನು ಆನಂದಿಸುವನು.
{وَأَمَّا مَنۡ خَفَّتۡ مَوَٰزِينُهُۥ} 8. {ವಅಮ್ಮಾ ಮನ್ ಖಫ್ಫತ್ ಮವಾಝೀನುಹ್}: ಯಾರ ದುಷ್ಕರ್ಮಗಳು ಅವನ ಸತ್ಕರ್ಮಗಳಿಗಿಂತ ಹೆಚ್ಚು ಭಾರವಾಗುತ್ತದೋ.
{فَأُمُّهُۥ هَاوِيَةٞ} 9. {ಫಉಮ್ಮುಹೂ ಹಾವಿಯ}: ಪುನರುತ್ಥಾನದ ದಿನ ಅವನ ವಾಸಸ್ಥಳ ಮತ್ತು ವಸತಿ ನರಕಾಗ್ನಿಯಾಗಿರುವುದು.
{وَمَآ أَدۡرَىٰكَ مَا هِيَهۡ} 10. {ವಮಾ ಅದ್ರಾಕ ಮಾ ಹಿಯಹ್}: ಓ ಪ್ರವಾದಿಯವರೇ! ಅದು ಏನೆಂದು ನಿಮಗೇನು ಗೊತ್ತು?
{نَارٌ حَامِيَةُۢ} 11. {ನಾರುನ್ ಹಾಮಿಯ}: ಇದು ಧಗಧಗನೆ ಉರಿಯುವ ಬೆಂಕಿಯಾಗಿದೆ.
ಉತ್ತರ: ಸೂರಃ ಅತ್ತಕಾಸುರ್ ಮತ್ತು ಅದರ ವ್ಯಾಖ್ಯಾನ
ಪರಮ ದಯಾಮಯನೂ ಕರುಣಾನಿಧಿಯೂ ಆಗಿರುವ ಅಲ್ಲಾಹನ ನಾಮದಿಂದ.
ಹೆಚ್ಚು ಹೆಚ್ಚಾಗಿ ಮತ್ತು ಇತರರಿಗಿಂತ ಅಧಿಕವಾಗಿ ಸಂಪಾದಿಸುವ ಚಿಂತೆಯು ನಿಮ್ಮನ್ನು ಅಲಕ್ಷ್ಯರನ್ನಾಗಿಸಿ ಬಿಟ್ಟಿದೆ. ಕೊನೆಗೆ (ಇದೇ ಚಿಂತೆಯಲ್ಲಿ) ನೀವು ಗೋರಿಯ ಅಂಚನ್ನು ತಲುಪಿರುವಿರಿ ಖಂಡಿತ ಅಲ್ಲ, ಸದ್ಯವೇ ನಿಮಗೆ ತಿಳಿಯಲಿದೆ. ಇನ್ನೂ (ಕೇಳಿರಿ) ಖಂಡಿತ ಅಲ್ಲ, ಸದ್ಯವೇ ನಿಮಗೆ ತಿಳಿಯಲಿದೆ. ಖಂಡಿತ ಅಲ್ಲ, ನೀವು ಖಚಿತ ಜ್ಞಾನದ ಆಧಾರದಲ್ಲಿ (ಈ ಪ್ರವೃತ್ತಿಯ ಪರಿಣಾಮವನ್ನು) ತಿಳಿದಿರುತ್ತಿದ್ದರೆ! (ನಿಮ್ಮ ವರ್ತನೆ ಹೀಗಿರುತ್ತಿರಲಿಲ್ಲ.) ನೀವು ನರಕವನ್ನು ಕಂಡೇ ತೀರುವಿರಿ. ಇನ್ನೂ (ಕೇಳಿರಿ) ನೀವು ಅದನ್ನು ಖಚಿತ ದೃಷ್ಟಿಗಳಿಂದ ನೋಡುವಿರಿ. ಆ ಬಳಿಕ ಖಂಡಿತವಾಗಿಯೂ ಈ ಅನುಗ್ರಹಗಳ ಬಗ್ಗೆ ನೀವು ಪ್ರಶ್ನಿಸಲ್ಪಡುವಿರಿ. [ಸೂರ ಅತ್ತಕಾಸುರ್:1- 8].
ತಫ್ಸೀರ್ (ವಿವರಣೆ).
{أَلۡهَىٰكُمُ ٱلتَّكَاثُرُ} 1. {ಅಲ್‌ಹಾಕುಮು ತ್ತಕಾಸುರ್}: ಓ ಜನರೇ, ನೀವು ನಿಮ್ಮ ಸಂಪತ್ತು ಮತ್ತು ಮಕ್ಕಳ ಬಗ್ಗೆ ತೋರುವ ಅಹಂಭಾವವು ನಿಮ್ಮನ್ನು ಅಲ್ಲಾಹನ ಅನುಸರಣೆ ಮಾಡದಂತೆ ಮಗ್ನಗೊಳಿಸಿದೆ.
{حَتَّىٰ زُرۡتُمُ ٱلۡمَقَابِرَ} 2. {ಹತ್ತಾ ಝುರ್ತುಮುಲ್ ಮಕಾಬಿರ್}: ನೀವು ಸತ್ತು ನಿಮ್ಮ ಸಮಾಧಿಗಳನ್ನು ಪ್ರವೇಶಿಸುವವರೆಗೆ.
{كَلَّا سَوۡفَ تَعۡلَمُونَ} 3. {ಕಲ್ಲಾ ಸೌಫ ತಅ್‌ಲಮೂನ್}: ಅಲ್ಲಾಹನ ಅನುಸರಣೆಯನ್ನು ಬಿಟ್ಟು ಅಹಂಭಾವದಲ್ಲಿ ಮುಳುಗುವುದು ನಿಮಗೆ ಭೂಷಣವಲ್ಲ. ಈ ರೀತಿ ಅಹಂಭಾವದಲ್ಲಿ ಮುಳುಗಿದ್ದರ ಪರಿಣಾಮವನ್ನು ನೀವು ಸದ್ಯದಲ್ಲೇ ತಿಳಿದುಕೊಳ್ಳಲಿರುವಿರಿ.
{ثُمَّ كَلَّا سَوۡفَ تَعۡلَمُونَ} 4. {ಸುಮ್ಮ ಕಲ್ಲಾ ಸೌಫ ತಅ್‌ಲಮೂನ್}: ನಂತರ, ನೀವು ಸದ್ಯದಲ್ಲೇ ಅದರ ಪರಿಣಾಮವನ್ನು ತಿಳಿದುಕೊಳ್ಳಲಿರುವಿರಿ.
{كَلَّا لَوۡ تَعۡلَمُونَ عِلۡمَ ٱلۡيَقِينِ} 5. {ಕಲ್ಲಾ ಲೌ ತಅ್‌ಲಮೂನ ಇಲ್ಮಲ್ ಯಕೀನ್}: ನಿಮ್ಮನ್ನು ಅಲ್ಲಾಹನ ಬಳಿಗೆ ಪುನರುತ್ಥಾನಗೊಳಿಸಿ ತರಲಾಗುತ್ತದೆ ಮತ್ತು ಅವನು ನಿಮ್ಮ ಕರ್ಮಗಳಿಗೆ ಪ್ರತಿಫಲವನ್ನು ನೀಡುತ್ತಾನೆ ಎಂದು ನೀವು ನಿಜವಾಗಿ ಮತ್ತು ಖಚಿತವಾಗಿ ತಿಳಿದುಕೊಂಡಿದ್ದರೆ ನೀವು ನಿಮ್ಮ ಆಸ್ತಿ ಮತ್ತು ಮಕ್ಕಳ ವಿಷಯದಲ್ಲಿ ಅಹಂಭಾವದಲ್ಲಿ ಮುಳುಗುತ್ತಿರಲಿಲ್ಲ.
{لَتَرَوُنَّ ٱلۡجَحِيمَ} 6. {ಲತರವುನ್ನಲ್ ಜಹೀಮ್}: ಅಲ್ಲಾಹನಾಣೆ! ಪುನರುತ್ಥಾನದ ದಿನ ನೀವು ಖಂಡಿತವಾಗಿಯೂ ನರಕಾಗ್ನಿಯನ್ನು ನೋಡುವಿರಿ.
{ثُمَّ لَتَرَوُنَّهَا عَيۡنَ ٱلۡيَقِينِ} 7. {ಸುಮ್ಮ ಲತರವುನ್ನಹಾ ಅಯ್ನಲ್ ಯಕೀನ್}: ನಂತರ ನೀವು ಅದನ್ನು ಸಂಪೂರ್ಣ ಖಚಿತವಾಗಿ ಯಾವುದೇ ಸಂಶಯವಿಲ್ಲದೆ ಕಣ್ಣಾರೆ ನೋಡುವಿರಿ.
{ثُمَّ لَتُسۡـَٔلُنَّ يَوۡمَئِذٍ عَنِ ٱلنَّعِيمِ} 8. {ಸುಮ್ಮ ಲತುಸ್‌ಅಲುನ್ನ ಯೌಮಇಧಿನ್ ಅನಿನ್ನಈಮ್}: ನಂತರ ಆ ದಿನ ಅಲ್ಲಾಹನು ನಿಮ್ಮೊಡನೆ, ಅವನು ನಿಮಗೆ ಅನುಗ್ರಹಿಸಿದ ಆರೋಗ್ಯ, ಐಶ್ವರ್ಯ ಮುಂತಾದವುಗಳ ಬಗ್ಗೆ ವಿಚಾರಿಸಲಿದ್ದಾನೆ.
ಉತ್ತರ: ಸೂರ ಅಲ್-ಅಸ್ರ್ ಮತ್ತು ಅದರ ವ್ಯಾಖ್ಯಾನ:
ಪರಮ ದಯಾಮಯನೂ ಕರುಣಾನಿಧಿಯೂ ಆಗಿರುವ ಅಲ್ಲಾಹನ ನಾಮದಿಂದ.
ಕಾಲದಾಣೆ, ನಿಜವಾಗಿ ಮನುಷ್ಯನು ಮಹಾ ನಷ್ಟದಲ್ಲಿದ್ದಾನೆ. ಸತ್ಯವಿಶ್ವಾಸ ಸ್ವೀಕರಿಸಿದ, ಸತ್ಕರ್ಮ ಮಾಡುತ್ತಿದ್ದ ಮತ್ತು ಪರಸ್ಪರ ಸತ್ಯ ಹಾಗೂ ಸಹನೆಯನ್ನು ಉಪದೇಶಿಸುತ್ತಿದ್ದವರ ಹೊರತು. [ಸೂರ ಅಲ್-ಅಸ್ರ್:1- 3].
ತಫ್ಸೀರ್ (ವಿವರಣೆ).
{وَٱلۡعَصۡرِ} 1. {ವಲ್ ಅಸ್ರ್}: ಸರ್ವಶಕ್ತನಾದ ಅಲ್ಲಾಹು ಸಮಯದ ಮೇಲೆ ಆಣೆ ಮಾಡಿ ಹೇಳುತ್ತಾನೆ.
{إِنَّ ٱلۡإِنسَٰنَ لَفِي خُسۡرٍ} 2. {ಇನ್ನಲ್ ಇನ್ಸಾನ ಲಫೀ ಖುಸ್ರ್}: ನಿಸ್ಸಂದೇಹವಾಗಿಯೂ ಸರ್ವ ಮಾನವಕುಲವು ಸಂಪೂರ್ಣ ನಷ್ಟ ಮತ್ತು ನಾಶದಲ್ಲಿದೆ.
{إِلَّا ٱلَّذِينَ ءَامَنُواْ وَعَمِلُواْ ٱلصَّٰلِحَٰتِ وَتَوَاصَوۡاْ بِٱلۡحَقِّ وَتَوَاصَوۡاْ بِٱلصَّبۡرِ} 3. {ಇಲ್ಲಲ್ಲದೀನ ಆಮನೂ ವಅಮಿಲು ಸ್ಸಾಲಿಹಾತಿ ವತವಾಸವ್ ಬಿಲ್-ಹಕ್ಕಿ ವ ತವಾಸವ್ ಬಿಸ್ಸಬ್ರ್}: ಸತ್ಯವಿಶ್ವಾಸವಿಟ್ಟವರು, ಸತ್ಕರ್ಮವೆಸಗಿದವರು, ಸತ್ಯವನ್ನು ಪಾಲಿಸಲು ಪರಸ್ಪರ ಉಪದೇಶ ಮಾಡಿದವರು ಮತ್ತು ಸಹನೆಯನ್ನು ಪಾಲಿಸಲು ಪರಸ್ಪರ ಉಪದೇಶ ಮಾಡಿದವರ ಹೊರತು ಇವರೇ ಆ ನಷ್ಟದಿಂದ ಉಳಿಯುವವರಾಗಿದ್ದಾರೆ.
ಉತ್ತರ: ಸೂರ ಅಲ್-ಹುಮಝ ಮತ್ತು ಅದರ ವ್ಯಾಖ್ಯಾನ:
ಪರಮ ದಯಾಮಯನೂ ಕರುಣಾನಿಧಿಯೂ ಆಗಿರುವ ಅಲ್ಲಾಹನ ನಾಮದಿಂದ.
(ಎದುರೆದುರೇ) ಜನರನ್ನು ಮೂದಲಿಸುವ ಮತ್ತು (ಬೆನ್ನ ಹಿಂದೆ) ದೂಷಿಸುವ ಅಭ್ಯಾಸವಿರುವ ಪ್ರತಿಯೊಬ್ಬನಿಗೂ ವಿನಾಶವಿದೆ. ಅವನು ಸಂಪತ್ತನ್ನು ಸಂಗ್ರಹಿಸಿದನು ಮತ್ತು ಅದನ್ನು ಎಣಿಸಿ ಎಣಿಸಿ ಇಟ್ಟನು. ಅವನ ಸಂಪತ್ತು ಶಾಶ್ವತವಾಗಿ ಅವನ ಬಳಿಯಲ್ಲೇ ಇರುವುದೆಂದು ಅವನು ಭಾವಿಸುತ್ತಾನೆ. ಖಂಡಿತ ಇಲ್ಲ. ಅವನು ಪುಡಿಗುಟ್ಟಿ ಬಿಡುವ ಸ್ಥಳಕ್ಕೆ ಎಸೆಯಲ್ಪಡುವನು. ಪುಡಿಗುಟ್ಟಿ ಬಿಡುವ ಆ ಸ್ಥಳ ಏನೆಂದು ನಿಮಗೇನು ಗೊತ್ತು? ಚೆನ್ನಾಗಿ ಧಗಧಗಿಸಲ್ಪಟ್ಟಿರುವ ಅಲ್ಲಾಹನ ಬೆಂಕಿ. ಅದು ಹೃದಯಗಳವರೆಗೂ ತಲಪುವುದು. ಅದನ್ನು ಅವರ ಮೇಲೆ ಆವರಿಸಿ ಮುಚ್ಚಿ ಬಿಡಲಾಗುವುದು. ಅವರು ಎತ್ತರವಾದ ಸ್ತಂಭಗಳಲ್ಲಿ (ಸಿಲುಕಿಕೊಂಡಿರುವ ಸ್ಥಿತಿಯಲ್ಲಿ). [ಸೂರ ಅಲ್-ಹುಮಝ:1- 9].
ತಫ್ಸೀರ್ (ವಿವರಣೆ).
{وَيۡلٞ لِّكُلِّ هُمَزَةٖ لُّمَزَةٍ} 1. {ವೈಲುಲ್ಲಿಕುಲ್ಲಿ ಹುಮಝತಿಲ್ಲುಮಝಃ}: ಜನರನ್ನು ಪದೇ ಪದೇ ದೂಷಿಸುವ ಮತ್ತು ನಿಂದಿಸುವ ಪ್ರತಿಯೊಬ್ಬರಿಗೂ ದುರ್ಗತಿ ಮತ್ತು ಕಠೋರ ಶಿಕ್ಷೆಯಿದೆ.
{ٱلَّذِي جَمَعَ مَالٗا وَعَدَّدَهُۥ} 2. {ಅಲ್ಲಧೀ ಜಮಅ ಮಾಲನ್ ವಅದ್ದದಃ}: ಹಣವನ್ನು ಕೂಡಿಡುವುದು ಮತ್ತು ಎಣಿಸುವುದರ ಹೊರತು ಬೇರೆ ಯಾವುದರಲ್ಲೂ ಆಸಕ್ತಿಯಿಲ್ಲದವನು.
{يَحۡسَبُ أَنَّ مَالَهُۥٓ أَخۡلَدَهُۥ} 3. {ಯಹ್ಸಬು ಅನ್ನ ಮಾಲಹೂ ಅಖ್ಲದಃ}: ತಾನು ಕೂಡಿಟ್ಟ ಹಣವು ತನ್ನನ್ನು ಸಾವಿನಿಂದ ರಕ್ಷಿಸುತ್ತದೆ ಮತ್ತು ತಾನು ಭೂಲೋಕದಲ್ಲಿ ಶಾಶ್ವತವಾಗಿ ಬದುಕುತ್ತೇನೆ ಎಂದು ಅವನು ಭಾವಿಸುತ್ತಾನೆ.
{كَلَّاۖ لَيُنۢبَذَنَّ فِي ٱلۡحُطَمَةِ} 4. {ಕಲ್ಲಾ ಲಯುಂಬಝನ್ನ ಫಿಲ್ ಹುತಮಃ}: ನಿಜಸ್ಥಿತಿಯು ಈ ಅವಿವೇಕಿ ಚಿಂತಿಸಿದಂತಲ್ಲ. ಅವನನ್ನು ಖಂಡಿತವಾಗಿಯೂ ನರಕಾಗ್ನಿಗೆ ಎಸೆಯಲಾಗುವುದು. ಅದರ ಕಠೋರತೆಯಿಂದಾಗಿ ಅದರಲ್ಲಿ ಎಸೆಯಲಾಗುವ ಎಲ್ಲವನ್ನೂ ಅದು ಪುಡಿಗುಟ್ಟಿ ಬಿಡುವುದು.
{وَمَآ أَدۡرَىٰكَ مَا ٱلۡحُطَمَةُ} 5. {ವಮಾ ಅದ್ರಾಕ ಮಲ್ ಹುತಮಃ}:ಓ ಪ್ರವಾದಿಯವರೇ! ಎಸೆಯಲಾಗುವ ಎಲ್ಲವನ್ನೂ ಪುಡಿಗಟ್ಟುವ ಈ ಬೆಂಕಿ ಏನೆಂದು ನಿಮಗೇನು ಗೊತ್ತು?
{نَارُ ٱللَّهِ ٱلۡمُوقَدَةُ} 6. {ನಾರುಲ್ಲಾಹಿಲ್ ಮೂಖದಃ}: ಅದು ಧಗಧಗನೆ ಉರಿಯುವ ಅಲ್ಲಾಹನ ಅಗ್ನಿಯಾಗಿದೆ.
{ٱلَّتِي تَطَّلِعُ عَلَى ٱلۡأَفۡـِٔدَةِ} 7. {ಅಲ್ಲತೀ ತತ್ತಲಿಉ ಅಲಲ್ ಅಫ್‌ಇದಃ}: ಅದು ಜನರ ದೇಹಗಳನ್ನು ಬೇಧಿಸಿ ಅವರ ಹೃದಯಗಳನ್ನು ತಲುಪುತ್ತದೆ.
{إِنَّهَا عَلَيۡهِم مُّؤۡصَدَةٞ} 8. {ಇನ್ನಹಾ ಅಲೈಹಿಮ್ಮುಅ್‌ಸದಃ}: ಅದರ ದ್ವಾರಗಳು ಶಿಕ್ಷೆಗೊಳಗಾದವರ ಮೇಲೆ ಮುಚ್ಚಿಕೊಂಡಿರುವವು.
{فِي عَمَدٖ مُّمَدَّدَةِۭ} 9. {ಫೀ ಅಮ಼ದಿಮ್ಮುಮದ್ದದಃ}: ಅವರು ಅಲ್ಲಿಂದ ಹೊರಬರದಿರಲೆಂದು ಅವರಿಗೆ ಉದ್ದಕ್ಕೆ ಚಾಚಲಾಗಿರುವ ಸ್ತಂಭಗಳಿಂದ ಕಟ್ಟಲಾಗುವುದು.
ಉತ್ತರ: ಸೂರ ಅಲ್-ಫೀಲ್ ಮತ್ತು ಅದರ ವ್ಯಾಖ್ಯಾನ:
ಪರಮ ದಯಾಮಯನೂ ಕರುಣಾನಿಧಿಯೂ ಆಗಿರುವ ಅಲ್ಲಾಹನ ನಾಮದಿಂದ.
1 ನಿಮ್ಮ ಪ್ರಭು ಆನೆಯವರೊಂದಿಗೆ ಹೇಗೆ ವರ್ತಿಸಿದನೆಂಬುದನ್ನು ನೀವು ನೋಡಲಿಲ್ಲವೇ? 2 ಅವನು ಅವರ ಯೋಜನೆಯನ್ನು ನಿರರ್ಥಕಗೊಳಿಸಿ ಬಿಡಲಿಲ್ಲವೇ? 3 ಮತ್ತು ಅವನು ಅವರ ಮೇಲೆ ಪಕ್ಷಿಗಳ ಗುಂಪುಗಳನ್ನೇ ಕಳುಹಿಸಿಬಿಟ್ಟನು. 4 ಅವು ಅವರ ಮೇಲೆ ಸುಟ್ಟ ಮಣ್ಣಿನ ಕಲ್ಲುಗಳನ್ನು ಎಸೆಯುತ್ತಿದ್ದವು. 5 ತರುವಾಯ ಅವನು ಅವರನ್ನು (ಪ್ರಾಣಿಗಳು) ತಿಂದು ಹಾಕಿದ ಹೊಟ್ಟಿನಂತೆ ಮಾಡಿಬಿಟ್ಟನು. [ಸೂರ ಅಲ್-ಫೀಲ್:1-5]
ತಫ್ಸೀರ್ (ವಿವರಣೆ).
{أَلَمۡ تَرَ كَيۡفَ فَعَلَ رَبُّكَ بِأَصۡحَٰبِ ٱلۡفِيلِ} 1. {ಆಲಂ ತರ ಕೈಫ ಫಅಲ ರಬ್ಬುಕ ಬಿ ಅಸ್‌ಹಾಬಿಲ್ ಫೀಲ್}: ಓ ಪ್ರವಾದಿಯವರೇ! ಅಬ್ರಹ ಮತ್ತು ಅವನ ಸೈನಿಕರು —ಅಂದರೆ ಆನೆ ಸೇನೆಯ ಜನರು— ಕಅಬಾವನ್ನು ಕೆಡವಲು ಬಂದಾಗ ನಿಮ್ಮ ಪ್ರಭು ಏನು ಮಾಡಿದನೆಂದು ನಿಮಗೆ ತಿಳಿದಿಲ್ಲವೇ?
{أَلَمۡ يَجۡعَلۡ كَيۡدَهُمۡ فِي تَضۡلِيلٖ} 2. {ಆಲಂ ಯಜ್‌ಅಲ್ ಕೈದಹುಮ್ ಫೀ ತದ್‌ಲೀಲ್}: ಅದನ್ನು ಕೆಡವಲು ಅವರು ಹೂಡಿದ ಕುತಂತ್ರವನ್ನು ಅಲ್ಲಾಹನು ಸಂಪೂರ್ಣ ವಿಫಲಗೊಳಿಸಿದನು. ಆದ್ದರಿಂದ, ಜನರನ್ನು ಕಅಬಾದಿಂದ ದೂರಗೊಳಿಸಬೇಕು ಎಂಬ ಅವರ ಆಸೆ ಕೈಗೂಡಲಿಲ್ಲ ಅವರಿಗೆ ವಿನಾಶದ ಹೊರತಾಗಿ ಬೇರೇನೂ ಸಿಗಲಿಲ್ಲ.
{وَأَرۡسَلَ عَلَيۡهِمۡ طَيۡرًا أَبَابِيلَ} 3. {ವ ಅರ್ಸಲ ಅಲೈಹಿಂ ತ್ವೈರನ್ ಅಬಾಬೀಲ್}: ಅವನು ಅವರ ವಿರುದ್ಧ ಹಿಂಡು ಹಿಂಡಾಗಿ ಬರುವ ಹಕ್ಕಿಗಳನ್ನು ಕಳುಹಿಸಿದನು.
{تَرۡمِيهِم بِحِجَارَةٖ مِّن سِجِّيلٖ} 4. {ತರ್ಮೀಹಿಂ ಬಿಹಿಜಾರತಿಮ್ ಮಿನ್ ಸಿಜ್ಜೀಲ್}: ಆ ಹಕ್ಕಿಗಳು ಅವರ ಮೇಲೆ ಸುಟ್ಟ ಜೇಡಿಮಣ್ಣಿನ ಕಲ್ಲುಗಳನ್ನು ಎಸೆಯುತ್ತಿದ್ದವು.
{فَجَعَلَهُمۡ كَعَصۡفٖ مَّأۡكُولِۭ} 5. { ಫಜಅಲಹುಮ್ ಕಅಸ್ಫಿಮ್ ಮಅ್‌ಕೂಲ್}: ನಂತರ ಅಲ್ಲಾಹನು ಅವರನ್ನು ಜಾನುವಾರುಗಳು ತಿಂದ ಮತ್ತು ತುಳಿದ ಎಲೆಗಳಂತೆ ಮಾಡಿದನು.
ಉತ್ತರ: ಸೂರ ಖುರೈಶ್ ಮತ್ತು ಅದರ ವ್ಯಾಖ್ಯಾನ:
ಪರಮ ದಯಾಮಯನೂ ಕರುಣಾನಿಧಿಯೂ ಆಗಿರುವ ಅಲ್ಲಾಹನ ನಾಮದಿಂದ.
1 ಕುರೈಶರು ಪರಿಚಿತರಾದುದಕ್ಕಾಗಿ. 2 (ಅಂದರೆ) ಚಳಿಗಾಲ ಮತ್ತು ಬೇಸಗೆಯ ಪ್ರಯಾಣಗಳಿಗೆ ಪರಿಚಿತರಾದುದಕ್ಕಾಗಿ. 3 ಅವರು ಈ ಭವನದ ಪ್ರಭುವಿನ ಆರಾಧನೆ ಮಾಡಲಿ. 3 ಅವನು ಅವರನ್ನು ಹಸಿವೆಯಿಂದ ಪಾರುಗೊಳಿಸಿ ಅವರಿಗೆ ಉಣಿಸಿದನು ಮತ್ತು ಭಯದಿಂದ ರಕ್ಷಿಸಿ ಶಾಂತಿ ಪ್ರದಾನ ಮಾಡಿದನು. [ಸೂರ ಕುರೈಷ್:1- 4].
ತಫ್ಸೀರ್ (ವಿವರಣೆ).
{لِإِيلَٰفِ قُرَيۡشٍ} 1- {ಲಿಈಲಾಫಿ ಖುರೈಶ್} ಇಲ್ಲಿ ಹೇಳಿರುವುದು ಅವರಿಗೆ ಪರಿಚಿತವಾದ ಚಳಿಗಾಲ ಮತ್ತು ಬೇಸಿಗೆಯ ಪ್ರಯಾಣಗಳಾಗಿವೆ.
{إِۦلَٰفِهِمۡ رِحۡلَةَ ٱلشِّتَآءِ وَٱلصَّيۡفِ} 2. {ಈಲಾಫಿಹಿಮ್ ರಿಹ್ಲತಶ್ಶಿತಾಇ ವಸ್ಸೈಫ್}: ಅವರು ಸುರಕ್ಷಿತವಾಗಿ ಚಳಿಗಾಲದಲ್ಲಿ ಯಮನ್ ಮತ್ತು ಬೇಸಿಗೆಯಲ್ಲಿ ಸಿರಿಯಾಗೆ ಕೈಗೊಳ್ಳುವ ಪ್ರಯಾಣಗಳು.
{فَلۡيَعۡبُدُواْ رَبَّ هَٰذَا ٱلۡبَيۡتِ} 3. {ಫಲ್ ಯಅ್‌ಬುದು ರಬ್ಬ ಹಾಧಲ್ ಬೈತ್}: ಅವರು ಈ ಪವಿತ್ರ ಭವನದ ಪ್ರಭುವಾದ ಅಲ್ಲಾಹನನ್ನು ಮಾತ್ರ ಆರಾಧಿಸಲಿ. ಅವನೇ ಅವರಿಗೆ ಈ ಪ್ರಯಾಣವನ್ನು ಸುಗಮಗೊಳಿಸಿದವನು; ಅವರು ಅವನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ಮಾಡದಿರಲಿ.
{ٱلَّذِيٓ أَطۡعَمَهُم مِّن جُوعٖ وَءَامَنَهُم مِّنۡ خَوۡفِۭ} 4. {ಅಲ್ಲಧೀ ಅತ್ಅಮಹುಮ್ ಮಿನ್ ಜೂಇನ್ ವಆಮನಹುಮ್ ಮಿನ್ ಖೌಫ್}: ಅವರಿಗೆ ಹಸಿವಾದಾಗ ಅವರಿಗೆ ಆಹಾರ ನೀಡಿದವನು ಮತ್ತು ಅವರಿಗೆ ಭಯವಾದಾಗ ಅವರಿಗೆ ನಿರ್ಭಯತೆ ನೀಡಿದವನು. ಅಲ್ಲಾಹು ಅರಬ್ಬರ ಹೃದಯಗಳಲ್ಲಿ ಹರಮ್ ಮತ್ತು ಅದರ ನಿವಾಸಿಗಳ ಬಗ್ಗೆ ಗೌರವನ್ನಿಟ್ಟದ್ದೇ ಇದಕ್ಕೆ ಕಾರಣವಾಗಿದೆ.
ಉತ್ತರ: ಸೂರ ಅಲ್-ಮಾಊನ್ ಮತ್ತು ಅದರ ವ್ಯಾಖ್ಯಾನ:
ಪರಮ ದಯಾಮಯನೂ ಕರುಣಾನಿಧಿಯೂ ಆಗಿರುವ ಅಲ್ಲಾಹನ ನಾಮದಿಂದ.
ನೀವು ಕಂಡಿರಾ ಪರಲೋಕದ ಕರ್ಮಫಲಗಳನ್ನು ನಿರಾಕರಿಸುವವನನ್ನು? ಅವನೇ ತಾನೆ, ಅನಾಥನನ್ನು ದೂರ ದಬ್ಬುವವನು. ಮತ್ತು ದರಿದ್ರನಿಗೆ ಊಟ ಕೊಡಲು ಪ್ರೇರೇಪಿಸದವನು! ವಿನಾಶ ಕಾದಿದೆ ಆ ನಮಾಝ್ ನಿರ್ವಹಿಸುವವರಿಗೆ. ಅವರು ತಮ್ಮ ನಮಾಝಿನ ಬಗ್ಗೆ ಅನಾಸ್ಥೆ ತೋರುತ್ತಾರೆ, ಅವರು ತೋರಿಕೆಯ ಕೆಲಸ ಮಾಡುತ್ತಾರೆ. ಮತ್ತು (ಜನರಿಗೆ) ಸಾಮಾನ್ಯ ಅವಶ್ಯಕ ವಸ್ತುಗಳನ್ನು ಕೊಡುವುದಕ್ಕೂ ಹಿಂಜರಿಯುತ್ತಾರೆ. [ಸೂರ ಅಲ್-ಮಾಊನ್: 1-7].
ತಫ್ಸೀರ್ (ವಿವರಣೆ).
{أَرَءَيۡتَ ٱلَّذِي يُكَذِّبُ بِٱلدِّينِ} 1. {ಅರಐತಲ್ಲಧೀ ಯುಕದ್ದಿಬು ಬಿದ್ದೀನ್}: ಪುನರುತ್ಥಾನ ದಿನದ ಪ್ರತಿಫಲವನ್ನು ನಿಷೇಧಿಸುವವನು ಯಾರೆಂದು ನಿಮಗೆ ತಿಳಿದಿದೆಯೇ?
{فَذَٰلِكَ ٱلَّذِي يَدُعُّ ٱلۡيَتِيمَ} 2. {ಫಧಾಲಿಕಲ್ಲಧೀ ಯದುಉ್‌ಉಲ್ ಯತೀಮ್}: ಅವನು ಅನಾಥರಿಗೆ ಅವರು ಕೇಳಿದ್ದನ್ನು ಕೊಡದೆ ನಿರ್ದಾಕ್ಷಿಣ್ಯವಾಗಿ ಅಟ್ಟುವವನು.
{وَلَا يَحُضُّ عَلَىٰ طَعَامِ ٱلۡمِسۡكِينِ} 3. {ವಲಾ ಯಹುದ್ದು ಅಲಾ ತಆಮಿಲ್ ಮಿಸ್ಕೀನ್}: ಬಡವರಿಗೆ ಆಹಾರ ನೀಡುಲು ತನಗಾಗಲಿ ಇತರರಿಗಾಗಲಿ ಪ್ರೇರಣೆ ನೀಡದವನು.
{فَوَيۡلٞ لِّلۡمُصَلِّينَ} 4. {ಫವೈಲುಲ್ಲಿಲ್ ಮುಸಲ್ಲೀನ್}: ಆದ್ದರಿಂದ, ನಮಾಝ್ ಮಾಡುವವರಿಗೆ ವಿನಾಶ ಮತ್ತು ಶಿಕ್ಷೆ ಕಾದಿದೆ.
{ٱلَّذِينَ هُمۡ عَن صَلَاتِهِمۡ سَاهُونَ} 5. {ಅಲ್ಲಧೀನ ಹುಮ್ ಆನ್ ಸಲಾತಿಹಿಂ ಸಾಹೂನ್}: ಅವರು ತಮ್ಮ ನಮಾಝಿನ ಬಗ್ಗೆ ನಿರ್ಲಕ್ಷ್ಯರಾಗಿರುವರು. ಅದರ ಸಮಯ ಮುಗಿಯುವವರೆಗೂ ಅವರು ಅದರ ಬಗ್ಗೆ ಯೋಚಿಸುವುದಿಲ್ಲ.
{ٱلَّذِينَ هُمۡ يُرَآءُونَ} 6. {ಅಲ್ಲಧೀನ ಹುಮ್ ಯುರಾಊನ್}: ಅವರು ತಮ್ಮ ನಮಾಝ್ ಮತ್ತು ಸತ್ಕರ್ಮಗಳನ್ನು ತೋರಿಕೆಗಾಗಿ ನಿರ್ವಹಿಸುತ್ತಾರೆ. ಅಲ್ಲಾಹನಿಗೆ ನಿಷ್ಕಳಂಕವಾಗಿ ನಿರ್ವಹಿಸುವುದಿಲ್ಲ.
{وَيَمۡنَعُونَ ٱلۡمَاعُونَ} 7. {ವಯಮ್ನಊನಲ್ ಮಾಊನ್}: ಇತರರಿಗೆ ಸಹಾಯ ಮಾಡುವುದರಲ್ಲಿ ಯಾವುದೇ ತೊಂದರೆಯಾಗದ ಸಣ್ಣ ಸಣ್ಣ ವಿಷಯಗಳಲ್ಲೂ ಅವರು ಇತರರಿಗೆ ಸಹಾಯ ಮಾಡುವುದಿಲ್ಲ.
ಉತ್ತರ: ಸೂರ ಅಲ್-ಕೌಸರ್ ಮತ್ತು ಅದರ ವ್ಯಾಖ್ಯಾನ:
ಪರಮ ದಯಾಮಯನೂ ಕರುಣಾನಿಧಿಯೂ ಆಗಿರುವ ಅಲ್ಲಾಹನ ನಾಮದಿಂದ.
1 (ಸಂದೇಶವಾಹಕರೇ) ನಾವು ನಿಮಗೆ ಕೌಸರ್ ದಯಪಾಲಿಸಿರುತ್ತೇವೆ. 2 ನೀವಿನ್ನು ನಿಮ್ಮ ಪ್ರಭುವಿಗಾಗಿಯೇ ನಮಾಝ್ ನಿರ್ವಹಿಸಿರಿ ಮತ್ತು ಬಲಿದಾನ ನೀಡಿರಿ. 3 ಖಂಡಿತವಾಗಿಯೂ ನಿಮ್ಮ ಶತ್ರುವೇ ಮೂಲ ಕಡಿಯಲ್ಪಟ್ಟವನಾಗಿರುವನು. [ಸೂರ ಅಲ್-ಕೌಸರ್:1-3]
ತಫ್ಸೀರ್ (ವಿವರಣೆ).
{إِنَّآ أَعۡطَيۡنَٰكَ ٱلۡكَوۡثَرَ} 1. {ಇನ್ನಾ ಆಅ್‌ತೈನಾಕಲ್ ಕೌಸರ್}: ಓ ಪ್ರವಾದಿಯವರೇ, ನಾವು ನಿಮಗೆ ಹೇರಳ ಒಳಿತುಗಳನ್ನು ನೀಡಿದ್ದೇವೆ. ಸ್ವರ್ಗದಲ್ಲಿರುವ ಕೌಸರ್ ನದಿಯು ಅದರಲ್ಲೊಂದಾಗಿದೆ.
{فَصَلِّ لِرَبِّكَ وَٱنۡحَرۡ} 2. {ಫಸಲ್ಲಿ ಲಿ ರಬ್ಬಿಕ ವನ್‌ಹರ್}: ಆದ್ದರಿಂದ, ಇದಕ್ಕಾಗಿ ಅಲ್ಲಾಹನಿಗೆ ಧನ್ಯವಾದ ಸಲ್ಲಿಸಿರಿ. ಅಂದರೆ ಅವನಿಗೆ ಮಾತ್ರ ನಮಾಝ್ ಮತ್ತು ಬಲಿಕರ್ಮಗಳನ್ನು ನಿರ್ವಹಿಸಿರಿ. ಬಹುದೇವರಾಧಕರು ಅವರ ವಿಗ್ರಹಗಳ ಸಾಮೀಪ್ಯ ಪಡೆಯಲು ಬಲಿ ನೀಡುವಂತೆ ನೀವು ಮಾಡಬೇಡಿ.
{إِنَّ شَانِئَكَ هُوَ ٱلۡأَبۡتَرُ} 3. {ಇನ್ನ ಶಾನಿಅಕ ಹುವಲ್ ಅಬ್ತರ್}: ಅಂದರೆ ನಿಮ್ಮನ್ನು ದ್ವೇಷಿಸುವವನು. ಅವನು ಎಲ್ಲಾ ಒಳಿತುಗಳನ್ನು ನಿಷೇಧಿಸಲಾದವನು. ಅವನನ್ನು ಯಾರಾದರೂ ನೆನಪು ಮಾಡಿದರೂ ಕೆಟ್ಟದಾಗಿಯಲ್ಲದೆ ನೆನಪು ಮಾಡುವುದಿಲ್ಲ.
ಉತ್ತರ: ಸೂರ ಅಲ್-ಕಾಫಿರೂನ್ ಮತ್ತು ಅದರ ವ್ಯಾಖ್ಯಾನ:
ಪರಮ ದಯಾಮಯನೂ ಕರುಣಾನಿಧಿಯೂ ಆಗಿರುವ ಅಲ್ಲಾಹನ ನಾಮದಿಂದ.
1 ಹೇಳಿ ಬಿಡಿರಿ! ಓ, ಸತ್ಯನಿಷೇಧಿಗಳೇ, 2 ನೀವು ಆರಾಧಿಸುವವುಗಳನ್ನು ನಾನು ಆರಾಧಿಸುವುದಿಲ್ಲ. 3 ಮತ್ತು ನಾನು ಆರಾಧಿಸುವವನನ್ನು ನೀವು ಆರಾಧಿಸುವವರಲ್ಲ. 5 ಮತ್ತು ನೀವು ಆರಾಧಿಸಿದವುಗಳ ಆರಾಧನೆಯನ್ನು ನಾನೂ ಮಾಡುವವನಲ್ಲ. 5 ನಾನು ಆರಾಧಿಸುವವನನ್ನು ನೀವೂ ಆರಾಧಿಸುವವರಲ್ಲ. 6 ನಿಮಗೆ ನಿಮ್ಮ ಧರ್ಮ ಮತ್ತು ನನಗೆ ನನ್ನ ಧರ್ಮ. [ಸೂರ ಅಲ್-ಕಾಫಿರೂನ್:1-6].
ತಫ್ಸೀರ್ (ವಿವರಣೆ).
{قُلۡ يَٰٓأَيُّهَا ٱلۡكَٰفِرُونَ} 1. {ಖುಲ್ ಯಾ ಅಯ್ಯುಹಲ್ ಕಾಫಿರೂನ್}: ಓ ಪ್ರವಾದಿಯವರೇ, ಹೇಳಿರಿ: ಓ ಅಲ್ಲಾಹನನ್ನು ನಿಷೇಧಿಸಿದವರೇ!
{لَآ أَعۡبُدُ مَا تَعۡبُدُونَ} 2. {ಲಾ ಅಅ್‌ಬುದು ಮಾ ತಅ್‌ಬುದೂನ್}: ಈಗಲಾಗಲಿ ಅಥವಾ ಭವಿಷ್ಯದಲ್ಲಾಗಲಿ ನೀವು ಆರಾಧಿಸುವ ವಿಗ್ರಹಗಳನ್ನು ನಾನು ಆರಾಧಿಸುವುದಿಲ್ಲ.
{وَلَآ أَنتُمۡ عَٰبِدُونَ مَآ أَعۡبُدُ} 3. {ವಲಾ ಅಂತುಮ್ ಆಬಿದೂನ ಮಾ ಅಅ್‌ಬುದ್}: ನಾನು ಆರಾಧಿಸುವವನನ್ನು —ಅಂದರೆ ಅಲ್ಲಾಹನನ್ನು ಮಾತ್ರ— ನೀವು ಆರಾಧಿಸುವುದಿಲ್ಲ.
{وَلَآ أَنَا۠ عَابِدٞ مَّا عَبَدتُّمۡ} 4. {ವಲಾ ಅನ ಆಬಿದುಮ್ಮಾ ಅಬತ್ತುಮ್}: ನೀವು ಆರಾಧಿಸುವ ವಿಗ್ರಹಗಳನ್ನು ನಾನು ಎಂದಿಗೂ ಆರಾಧಿಸುವುದಿಲ್ಲ.
{وَلَآ أَنتُمۡ عَٰبِدُونَ مَآ أَعۡبُدُ} 5. {ವಲಾ ಅಂತುಮ್ ಆಬಿದೂನ ಮಾ ಅಅ್‌ಬುದ್}: ನಾನು ಆರಾಧಿಸುವವನನ್ನು —ಅಂದರೆ ಅಲ್ಲಾಹನನ್ನು ಮಾತ್ರ— ನೀವು ಆರಾಧಿಸುವುದಿಲ್ಲ.
{لَكُمۡ دِينُكُمۡ وَلِيَ دِينِ} 6. {ಲಕುಮ್ ದೀನುಕುಮ್ ವಲಿಯ ದೀನ್}: ನೀವು ನಿಮಗಾಗಿ ಸ್ವಯಂ ನಿರ್ಮಿಸಿದ ನಿಮ್ಮ ಧರ್ಮವು ನಿಮಗೆ. ಅಲ್ಲಾಹು ನನಗೆ ಅವತೀರ್ಣಗೊಳಿಸಿದ ಧರ್ಮವು ನನಗೆ.
ಉತ್ತರ: ಸೂರ ಅನ್ನಸ್ರ್ ಮತ್ತು ಅದರ ವ್ಯಾಖ್ಯಾನ:
ಪರಮ ದಯಾಮಯನೂ ಕರುಣಾನಿಧಿಯೂ ಆಗಿರುವ ಅಲ್ಲಾಹನ ನಾಮದಿಂದ.
1 ಅಲ್ಲಾಹನ ಸಹಾಯ ಬಂದು ಬಿಟ್ಟಾಗ ಮತ್ತು ವಿಜಯ ಪ್ರಾಪ್ತವಾದಾಗ. 2 ಮತ್ತು (ಸಂದೇಶವಾಹಕರೇ) ಜನರು ತಂಡೋಪತಂಡವಾಗಿ ಅಲ್ಲಾಹನ ಧರ್ಮದಲ್ಲಿ ಪ್ರವೇಶಿಸುತ್ತಿರುವುದನ್ನು ನೀವು ಕಂಡಾಗ. 3 ನಿಮ್ಮ ಪ್ರಭುವಿನ ಪ್ರಶಂಸೆಯೊಂದಿಗೆ ಅವನ ಕೀರ್ತನೆ ಮಾಡಿರಿ ಮತ್ತು ಅವನೊಡನೆ ಕ್ಷಮೆ ಯಾಚಿಸಿರಿ. ನಿಸ್ಸಂದೇಹವಾಗಿಯೂ ಅವನು ಅತ್ಯಧಿಕ ಪಶ್ಚಾತ್ತಾಪ ಸ್ವೀಕರಿಸುವವನಾಗಿರುತ್ತಾನೆ. [ಸೂರ ಅನ್ನಸ್ರ್:1-3].
ತಫ್ಸೀರ್ (ವಿವರಣೆ).
{إِذَا جَآءَ نَصۡرُ ٱللَّهِ وَٱلۡفَتۡحُ} 1. {ಇದಾ ಜಾಅ ನಸ್ರುಲ್ಲಾಹಿ ವಲ್ ಫತ್‌ಹ್}: ಓ ಪ್ರವಾದಿಯವರೇ, ಅಲ್ಲಾಹನ ವತಿಯಿಂದ ನಿಮ್ಮ ಧರ್ಮಕ್ಕೆ ವಿಜಯ ಮತ್ತು ಶಕ್ತಿ ಬಂದಾಗ ಮತ್ತು ಮಕ್ಕಾ ವಿಜಯ ಸಂಭವಿಸಿದಾಗ.
{وَرَأَيۡتَ ٱلنَّاسَ يَدۡخُلُونَ فِي دِينِ ٱللَّهِ أَفۡوَاجٗا} 2. {ವ ರಅಯ್ತನ್ನಾಸ ಯದ್‌ಖುಲೂನ ಫೀ ದೀನಿಲ್ಲಾಹಿ ಅಫ್ವಾಜಾ}: ಮತ್ತು ಜನರು ಒಂದರ ನಂತರ ಒಂದರಂತೆ ಗುಂಪು ಗುಂಪಾಗಿ ಇಸ್ಲಾಂ ಧರ್ಮಕ್ಕೆ ಬರುವುದನ್ನು ನೀವು ನೋಡಿದಾಗ.
{فَسَبِّحۡ بِحَمۡدِ رَبِّكَ وَٱسۡتَغۡفِرۡهُۚ إِنَّهُۥ كَانَ تَوَّابَۢا} 3. {ಫಸಬ್ಬಿಹ್ ಬಿಹಮ್ದಿ ರಬ್ಬಿಕ ವಸ್ತಗ್ಫಿರ್ಹು, ಇನ್ನಹೂ ಕಾನ ತವ್ವಾಬಾ}: ಇದು ನಿಮ್ಮ ಕರ್ತವ್ಯದ ಸಮಾಪ್ತಿಯು ಹತ್ತಿರವಾಗುತ್ತಿದೆ ಎಂಬುದರ ಚಿಹ್ನೆಯಾಗಿದೆಯೆಂದು ನೀವು ತಿಳಿದಿರಬೇಕಾಗಿದೆ. ಆದ್ದರಿಂದ ಸಹಾಯ ಮತ್ತು ವಿಜಯ ನೀಡಿದ್ದಕ್ಕಾಗಿ ನಿಮ್ಮ ಪ್ರಭುವಿಗೆ ಕೃತಜ್ಞತೆ ಸಲ್ಲಿಸಲು ಅವನ ತಸ್ಬೀಹ್ ಮಾಡಿ ಮತ್ತು ಅವನಲ್ಲಿ ಕ್ಷಮೆಯಾಚಿಸಿ. ಏಕೆಂದರೆ ಅವನು ತನ್ನ ದಾಸರ ಪಶ್ಚಾತ್ತಾಪವನ್ನು ಸ್ವೀಕರಿಸುತ್ತಾನೆ ಮತ್ತು ಅವರನ್ನು ಕ್ಷಮಿಸುತ್ತಾನೆ.
ಉತ್ತರ: ಸೂರ ಅಲ್-ಮಸದ್ ಮತ್ತು ಅದರ ವ್ಯಾಖ್ಯಾನ:
ಪರಮ ದಯಾಮಯನೂ ಕರುಣಾನಿಧಿಯೂ ಆಗಿರುವ ಅಲ್ಲಾಹನ ನಾಮದಿಂದ.
1 ಅಬೂಲಹಬನ ಕೈಗಳು ಮುರಿದು ಹೋದುವು ಮತ್ತು ಅವನು ನಾಶವಾದನು. 2 ಅವನ ಸಂಪತ್ತಾಗಲಿ ಅವನ ಸಂಪಾದನೆ ಯಾಗಲಿ ಅವನ ಯಾವ ಕೆಲಸಕ್ಕೂ ಬರಲಿಲ್ಲ. 3 ಖಂಡಿತವಾಗಿಯೂ ಅವನು ಧಗಧಗಿಸುವ ಅಗ್ನಿಯಲ್ಲಿ ಹಾಕಲ್ಪಡುವನು. 4 ಮತ್ತು (ಅವನ ಜೊತೆ) ಸೌದೆಯನ್ನು ಹೊರುವವಳಾದ ಅವನ ಪತ್ನಿ ಕೂಡಾ. 5 ಅವಳ ಕೊರಳಲ್ಲಿ ಖರ್ಜೂರ ಮರದ ನಾರಿನ ಹಗ್ಗವಿರುವುದು. [ಸೂರ ಅಲ್-ಮಸದ್:1-5]
ತಫ್ಸೀರ್ (ವಿವರಣೆ).
{تَبَّتۡ يَدَآ أَبِي لَهَبٖ وَتَبَّ} 1. {ತಬ್ಬತ್ ಯದಾ ಅಬೀ ಲಹಬಿನ್ ವತಬ್ಬ್}: ಪ್ರವಾದಿಯ ತಂದೆಯ ಸಹೋದರ ಅಬೂ ಲಹಬ್ ಬಿನ್ ಅಬ್ದುಲ್ ಮುತ್ತಲಿಬ್‌ನ ಕೈಗಳು ನಾಶವಾಗಲಿ ಮತ್ತು ಅವನ ಪರಿಶ್ರಮಗಳು ವಿಫಲವಾಗಲಿ. ಏಕೆಂದರೆ ಅವನು ಪ್ರವಾದಿ(ಸ) ರಿಗೆ ಕಿರುಕುಳ ನೀಡುತ್ತಿದ್ದನು.
{مَآ أَغۡنَىٰ عَنۡهُ مَالُهُۥ وَمَا كَسَبَ} 2. {ಮಾ ಅಗ್‌ನಾ ಅನ್‌ಹು ಮಾಲುಹು ವಮಾ ಕಸಬ್}: ಅವನ ಸಂಪತ್ತು ಮತ್ತು ಮಕ್ಕಳಿಂದ ಅವನಿಗೆ ಉಪಯೋಗವಾಗಿದೆಯೇ? ಇಲ್ಲ. ಅವನ ಸಂಪತ್ತು ಮತ್ತು ಮಕ್ಕಳು ಅವನನ್ನು ಶಿಕ್ಷೆಯಿಂದ ರಕ್ಷಿಸಲಿಲ್ಲ ಮತ್ತು ಅವನಿಗೆ ದಯಾಭಿಕ್ಷೆಯನ್ನೂ ಕೊಡಲಿಲ್ಲ.
{سَيَصۡلَىٰ نَارٗا ذَاتَ لَهَبٖ} 3. {ಸಯಸ್‌ಲಾ ನಾರನ್ ಝಾತ ಲಹಬ್}: ಪುನರುತ್ಥಾನ ದಿನ ಅವನು ಜ್ವಾಲೆಗಳಿರುವ ನರಕವನ್ನು ಪ್ರವೇಶಿಸುವನು ಮತ್ತು ಅದರ ಬಿಸಿಯನ್ನು ಅನುಭವಿಸುವನು.
{وَٱمۡرَأَتُهُۥ حَمَّالَةَ ٱلۡحَطَبِ} 4. {ವಮ್ರಅತುಹೂ ಹಮ್ಮಾಲತಲ್ ಹತಬ್}: ಪ್ರವಾದಿ(ಸ) ನಡೆಯುವ ದಾರಿಯಲ್ಲಿ ಮುಳ್ಳುಗಳನ್ನು ಎಸೆಯುವ ಮೂಲಕ ಅವರಿಗೆ ಕಿರುಕುಳ ನೀಡುತ್ತಿದ್ದ ಅಬೂ ಲಹಬನ ಪತ್ನಿ ಉಮ್ಮು ಜಮೀಲ್ ಕೂಡ ನರಕವನ್ನು ಪ್ರವೇಶಿಸುಳು.
{فِي جِيدِهَا حَبۡلٞ مِّن مَّسَدِۭ} 5. {ಪೀ ಜೀದಿಹಾ ಹಬ್‌ಲುಮ್ಮಿಮ್ಮಸದ್}: ಅವಳ ಕೊರಳಿಗೆ ಬಿಗಿಯಾಗಿ ಕಟ್ಟಲಾದ ಹಗ್ಗವಿರುವುದು ಅದರ ಮೂಲಕ ಅವಳನ್ನು ನರಕಕ್ಕೆ ಒಯ್ಯಲಾಗುವುದು.
ಉತ್ತರ: ಸೂರ ಅಲ್-ಇಖ್ಲಾಸ್ ಮತ್ತು ಅದರ ವ್ಯಾಖ್ಯಾನ:
ಪರಮ ದಯಾಮಯನೂ ಕರುಣಾನಿಧಿಯೂ ಆಗಿರುವ ಅಲ್ಲಾಹನ ನಾಮದಿಂದ.
1 ಹೇಳಿರಿ- ಅವನು ಅಲ್ಲಾಹನು ಏಕೈಕನು. 2 ಅಲ್ಲಾಹನು ಸಕಲರಿಂದಲೂ ನಿರಪೇಕ್ಷನು ಮತ್ತು ಸರ್ವರೂ ಅವನ ಅವಲಂಬಿತರು. 3 ಅವನಿಗೆ ಯಾವುದೇ ಸಂತಾನವಿಲ್ಲ, ಅವನು ಯಾರ ಸಂತಾನವೂ ಅಲ್ಲ. 4 ಅವನಿಗೆ ಸರಿಸಮಾನರು ಯಾರೂ ಇಲ್ಲ. [ಸೂರ ಅಲ್-ಇಖ್ಲಾಸ್:1-4].
ತಫ್ಸೀರ್ (ವಿವರಣೆ).
{قُلۡ هُوَ ٱللَّهُ أَحَدٌ} 1. {ಕುಲ್ ಹುವಲ್ಲಾಹು ಅಹದ್}: ಓ ಪ್ರವಾದಿಯವರೇ, ಹೇಳಿರಿ: ಅವನು ಅಲ್ಲಾಹು; ಅವನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ.
{ٱللَّهُ ٱلصَّمَدُ} 2. {ಅಲ್ಲಾಹು ಸ್ಸಮದ್}: ಅಂದರೆ, ಸೃಷ್ಟಿಯ ಎಲ್ಲಾ ಅಗತ್ಯಗಳನ್ನು ಅವನೆಡೆಗೆ ಎತ್ತಲಾಗುತ್ತದೆ.
{لَمۡ يَلِدۡ وَلَمۡ يُولَدۡ} 3. {ಲಮ್ ಯಲಿದ್ ವಲಮ್ ಯೂಲದ್}: ಸರ್ವಶಕ್ತನಾದ ಅವನಿಗೆ ಯಾವುದೇ ಮಕ್ಕಳಿಲ್ಲ ಮತ್ತು ತಂದೆಯೂ ಇಲ್ಲ.
{وَلَمۡ يَكُن لَّهُۥ كُفُوًا أَحَدُۢ} 4. {ವ ಲಮ್ ಯಕುಲ್ಲಹೂ ಕುಫುವನ್ ಅಹದ್}: ಅವನ ಸೃಷ್ಟಿಗಳಲ್ಲಿ ಯಾರೂ ಅವನಂತೆ ಇಲ್ಲ.
ಉತ್ತರ: ಸೂರ ಅಲ್-ಫಲಕ್ ಮತ್ತು ಅದರ ವ್ಯಾಖ್ಯಾನ:
ಪರಮ ದಯಾಮಯನೂ ಕರುಣಾನಿಧಿಯೂ ಆಗಿರುವ ಅಲ್ಲಾಹನ ನಾಮದಿಂದ.
1 ಹೇಳಿರಿ- ನಾನು ಪ್ರಭಾತದ ಪ್ರಭುವಿನ ಅಭಯ ಯಾಚಿಸುತ್ತೇನೆ. 2 ಅವನು(ಅಲ್ಲಾಹನು) ಸೃಷ್ಟಿಸಿದ ಸಕಲ ವಸ್ತುಗಳ ಕೇಡಿನಿಂದ. 3 ಇರುಳಿನ ಅಂಧಕಾರವು ಕವಿದಾಗ ಉಂಟಾಗುವ ಕೇಡಿನಿಂದ. 4 ಗಂಟುಗಳ ಮೇಲೆ ಊದುವವರ (ಸ್ತ್ರೀಯರ) ಕೇಡಿನಿಂದ. 5 ಮತ್ತು ಮತ್ಸರಿಯು ಮತ್ಸರ ಪಡುವಾಗ ಅವನ ಕೇಡಿನಿಂದ (ಅಭಯ ಯಾಚಿಸುತ್ತೇನೆ). [ಸೂರ ಅಲ್-ಫಲಕ್:1-5]
ತಫ್ಸೀರ್ (ವಿವರಣೆ).
{قُلۡ أَعُوذُ بِرَبِّ ٱلۡفَلَقِ} 1. {ಖುಲ್ ಅಊಝು ಬಿರಬ್ಬಿಲ್ ಫಲಖ್}: ಓ ಪ್ರವಾದಿಯವರೇ, ಹೇಳಿರಿ: ನಾನು ಪ್ರಭಾತದ ಪ್ರಭುವಿನೊಡನೆ ರಕ್ಷೆ ಮತ್ತು ಆಶ್ರಯ ಬೇಡುತ್ತೇನೆ.
{مِن شَرِّ مَا خَلَقَ} 2. {ಮಿನ್ ಶರ್‍ರಿ ಮಾ ಖಲಕ್}: ಹಿಂಸಾತ್ಮಕ ಜೀವಿಗಳ ಕೆಡುಕಿನಿಂದ.
{وَمِن شَرِّ غَاسِقٍ إِذَا وَقَبَ} 3. {ವ ಮಿನ್ ಶರ್‍ರಿ ಗಾಸಿಕಿನ್ ಇಧಾ ವಕಬ್}: ರಾತ್ರಿಯಲ್ಲಿ ಪ್ರಾಣಿಗಳು ಮತ್ತು ಕಳ್ಳರಿಂದ ಉಂಟಾಗುವ ಕೆಡುಕುಗಳಿಂದ ನಾನು ಅಲ್ಲಾಹನಲ್ಲಿ ರಕ್ಷೆ ಬೇಡುತ್ತೇನೆ.
{وَمِن شَرِّ ٱلنَّفَّٰثَٰتِ فِي ٱلۡعُقَدِ} 4. {ವ ಮಿನ್ ಶರ್‍ರಿ ನ್ನಫ್ಫಾಸಾತಿ ಫಿಲ್ ಉಕದ್}: ಮತ್ತು ಗಂಟುಗಳ ಮೇಲೆ ಊದುವ ಮಾಟಗಾರರ ಕೆಡುಕುಗಳಿಂದ ನಾನು ಅಲ್ಲಾಹನಲ್ಲಿ ರಕ್ಷೆ ಬೇಡುತ್ತೇನೆ.
{وَمِن شَرِّ حَاسِدٍ إِذَا حَسَدَ} 5. {ವ ಮಿನ್ ಶರ್‍ರಿ ಹಾಸಿದಿನ್ ಇಧಾ ಹಸದ್}: ಅಸೂಯೆಗಾರ ಮತ್ತು ಜನರಿಗೆ ಅಲ್ಲಾಹು ದಯಪಾಲಿಸಿದ ಅನುಗ್ರಹಗಳು ಅವರಿಂದ ನಿವಾರಣೆಯಾಗಬೇಕು ಮತ್ತು ಅವರಿಗೆ ಹಾನಿಯಾಗಬೇಕೆಂದು ಬಯಸುವ ಮನುಷ್ಯ ದ್ವೇಷಿಯ ಕೆಡುಕುಗಳಿಂದ ನಾನು ಅಲ್ಲಾಹನಲ್ಲಿ ರಕ್ಷೆ ಬೇಡುತ್ತೇನೆ.
ಉತ್ತರ: ಸೂರ ಅನ್ನಾಸ್ ಮತ್ತು ಅದರ ವ್ಯಾಖ್ಯಾನ:
ಪರಮ ದಯಾಮಯನೂ ಕರುಣಾನಿಧಿಯೂ ಆಗಿರುವ ಅಲ್ಲಾಹನ ನಾಮದಿಂದ.
1 ಹೇಳಿರಿ- ನಾನು ಮಾನವರ ಪ್ರಭುವಿನ ಅಭಯ ಯಾಚಿಸುತ್ತೇನೆ. 2 ಮಾನವರ ಸಾಮ್ರಾಟನ 3 ಮಾನವರ ನೈಜ ಆರಾಧ್ಯನ 4 ಪದೇಪದೇ ಬಂದು ದುಷ್ಪ್ರೇರಣೆ ನೀಡುವವನ ಕೇಡಿನಿಂದ 5 ಜನರ ಮನಸ್ಸುಗಳಲ್ಲಿ ದುಷ್ಪ್ರೇರಣೆ ಉಂಟು ಮಾಡುವವನ ಕೇಡಿನಿಂದ 6 ಅವನು ಜಿನ್ನ್‌ಗಳ ಪೈಕಿಯಾಗಿರಲಿ, ಮಾನವರ ಪೈಕಿಯಾಗಿರಲಿ. [ಸೂರ ಅನ್ನಾಸ್:1-6].
ತಫ್ಸೀರ್ (ವಿವರಣೆ):
{قُلۡ أَعُوذُ بِرَبِّ ٱلنَّاسِ} 1. {ಕುಲ್ ಅಊಝು ಬಿರಬ್ಬಿ ನ್ನಾಸ್}: ಓ ಪ್ರವಾದಿಯವರೇ, ಹೇಳಿರಿ: ನಾನು ಮನುಷ್ಯರ ಪ್ರಭುವಿನೊಡನೆ ರಕ್ಷೆ ಮತ್ತು ಆಶ್ರಯ ಬೇಡುತ್ತೇನೆ.
{مَلِكِ ٱلنَّاسِ} 2. {ಮಲಿಕಿನ್ನಾಸ್}: ಅವರ ಕೆಲಸ-ಕಾರ್ಯಗಳಲ್ಲಿ ಅವನು ಅವನಿಷ್ಟದಂತೆ ವ್ಯವಹರಿಸುತ್ತಾನೆ. ಅವನ ಹೊರತು ಅವರಿಗೆ ಬೇರೆ ಯಜಮಾನರಿಲ್ಲ.
{إِلَٰهِ ٱلنَّاسِ} 3. {ಇಲಾಹಿನ್ನಾಸ್}: ಅವನೇ ನಿಜವಾದ ಆರಾಧ್ಯ. ಅವನ ಹೊರತು ಅವರಿಗೆ ಬೇರೆ ನಿಜವಾದ ಆರಾಧ್ಯರಿಲ್ಲ.
{مِن شَرِّ ٱلۡوَسۡوَاسِ ٱلۡخَنَّاسِ} 4. {ಮಿನ್ ಶರ್‍ರಿಲ್ ವಸ್ವಾಸಿಲ್ ಖನ್ನಾಸ್}: ಜನರಿಗೆ ದುರ್ಭೋಧನೆ ಮಾಡುವ ಶೈತಾನನ ಕೆಡುಕಿನಿಂದ.
{ٱلَّذِي يُوَسۡوِسُ فِي صُدُورِ ٱلنَّاسِ} 5. {ಅಲ್ಲಧೀ ಯುವಸ್ವಿಸು ಫೀ ಸುಜೂರಿನ್ನಾಸ್}: ಜನರ ಹೃದಯಗಳಲ್ಲಿ ದುರ್ಬೋಧನೆಗಳನ್ನು ಹಾಕುವವನ ಕೆಡುಕಿನಿಂದ
{مِنَ ٱلۡجِنَّةِ وَٱلنَّاسِ} 6. {ಮಿನಲ್ ಜಿನ್ನತಿ ವನ್ನಾಸ್}: ಅಂದರೆ, ದುರ್ಬೋಧನೆ ನೀಡುವವನು ಮನುಷ್ಯರಲ್ಲಿ ಸೇರಿದವನು ಅಥವಾ ಜಿನ್ನ್‌ಗಳಲ್ಲಿ ಸೇರಿದವನು ಆಗಿರಬಹುದು.