ಹದೀಸ್ ವಿಭಾಗ

ಉತ್ತರ: ಅಮೀರುಲ್ ಮೂಮಿನೀನ್ ಅಬು ಹಫ್ಸ್ ಉಮರ್ ಬಿನ್ ಖತ್ತಾಬ್ رَضِيَ اللَّهُ تَعَالَى عَنْهُ ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು ﷺ ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: “ಕರ್ಮಗಳು ಉದ್ದೇಶಗಳ ಮೇಲೆ ಅವಲಂಬಿತವಾಗಿವೆ. ಪ್ರತಿಯೊಬ್ಬ ವ್ಯಕ್ತಿಯೂ ತಾನು ಉದ್ದೇಶಿಸಿದ್ದನ್ನು ಮಾತ್ರ ಹೊಂದಿರುತ್ತಾನೆ. ಆದ್ದರಿಂದ ಯಾರು ಅಲ್ಲಾಹನ ಮತ್ತು ಅವನ ಸಂದೇಶವಾಹಕರ ಕಡೆಗೆ ವಲಸೆ ಹೋದನೋ; ಅವನ ವಲಸೆಯು ಅಲ್ಲಾಹನಿಗೆ ಮತ್ತು ಅವನ ಸಂದೇಶವಾಹಕರಿಗಾಗಿದೆ. ಯಾರು ಲೌಕಿಕ ಪ್ರಯೋಜನಗಳಿಗಾಗಿ ಅಥವಾ ಒಬ್ಬ ಮಹಿಳೆಯನ್ನು ಮದುವೆಯಾಗಲು ವಲಸೆ ಹೋದನೋ; ಅವನ ವಲಸೆಯು ಅವನು ವಲಸೆ ಹೋದುದಕ್ಕಾಗಿದೆ.” [ಬುಖಾರಿ ಮತ್ತು ಮುಸ್ಲಿಂ]
ಹದೀಸಿನ ಪ್ರಯೋಜನಗಳು:
1- ಪ್ರತಿಯೊಂದು ಕರ್ಮವೂ ಒಂದು ಉದ್ದೇಶವನ್ನು ಹೊಂದಿಯೇ ಇರುತ್ತದೆ. ಉದಾ: ನಮಾಜ್, ಉಪವಾಸ, ಹಜ್ಜ್ ಮತ್ತು ಇತರೆ ಕರ್ಮಗಳು.
2- ಉದ್ದೇಶವನ್ನು ಸರ್ವಶಕ್ತನಾದ ಅಲ್ಲಾಹನಿಗೆ ನಿಷ್ಕಳಂಕಗೊಳಿಸುವುದು ಕಡ್ಡಾಯವಾಗಿದೆ.
* ಎರಡನೇ ಹದೀಸ್:

ಉತ್ತರ: ಸತ್ಯವಿಶ್ವಾಸಿಗಳ ಮಾತೆ ಉಮ್ಮು ಅಬ್ದುಲ್ಲಾ ಆಯಿಷಾ رَضِيَ اللَّهُ عَنْهَا ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರುﷺ ಹೇಳಿದರು: "ಯಾರು ನಮ್ಮ ಈ ಧರ್ಮದ ವಿಷಯದಲ್ಲಿ ಅದರಲ್ಲಿಲ್ಲದ ಏನನ್ನಾದರೂ ಆವಿಷ್ಕರಿಸಿದರೆ, ಅದು ತಿರಸ್ಕೃತವಾಗಿದೆ." [ಬುಖಾರಿ ಮತ್ತು ಮುಸ್ಲಿಂ]
ಹದೀಸಿನ ಪ್ರಯೋಜನಗಳು:
1- ಧರ್ಮದಲ್ಲಿ ಹೊಸ ಆವಿಷ್ಕಾರಗಳ ನಿಷೇಧ.
2- ಹೊಸದಾಗಿ ಆವಿಷ್ಕರಿಸಲಾದ ಕರ್ಮಗಳು ತಿರಸ್ಕೃತವಾಗಿವೆ. ಅವು ಸ್ವೀಕಾರಯೋಗ್ಯವಲ್ಲ.
* ಮೂರನೇ ಹದೀಸ್:

ಉತ್ತರ: ಉಮರ್ ಇಬ್ನ್ ಅಲ್-ಖತ್ತಾಬ್ (ರ) ರಿಂದ ವರದಿ: ಒಂದು ದಿನ ನಾವು ಅಲ್ಲಾಹನ ಸಂದೇಶವಾಹಕರ(ಸ) ಬಳಿ ಕುಳಿತಿದ್ದೆವು. ಆಗ ಶುಭ್ರ ಬಿಳಿ ಬಣ್ಣದ ಬಟ್ಟೆ ಧರಿಸಿದ ಮತ್ತು ಕಡುಗಪ್ಪು ಕೂದಲನ್ನು ಹೊಂದಿದ್ದ ಒಬ್ಬ ವ್ಯಕ್ತಿ ಅಲ್ಲಿಗೆ ಬಂದರು. ಅವರಲ್ಲಿ ಪ್ರಯಾಣದ ಯಾವುದೇ ಕುರುಹು ಗೋಚರಿಸುತ್ತಿರಲಿಲ್ಲ. ನಮ್ಮಲ್ಲಿ ಯಾರಿಗೂ ಅವರ ಪರಿಚಯವಿರಲಿಲ್ಲ. ಎಲ್ಲಿಯವರೆಗೆಂದರೆ ಅವರು ಪ್ರವಾದಿ(ಸ) ರವರ ಬಳಿ ಬಂದು (ಎರಡು ಕಾಲುಗಳನ್ನು ಮಡಚಿಟ್ಟು), ತಮ್ಮ ಮೊಣಕಾಲನ್ನು ಪ್ರವಾದಿ(ಸ) ರವರ ಮೊಣಕಾಲಿಗೆ ತಾಗಿಸಿ ಕುಳಿತರು. ನಂತರ ತಮ್ಮ ಕೈಯನ್ನು ತೊಡೆಯ ಮೇಲಿಟ್ಟು ಹೇಳಿದರು: “ಓ ಮುಹಮ್ಮದ್! ನನಗೆ ಇಸ್ಲಾಮಿನ ಬಗ್ಗೆ ತಿಳಿಸಿಕೊಡಿ.” ಅಲ್ಲಾಹನ ಸಂದೇಶವಾಹಕರು(ಸ) ಹೇಳಿದರು: “ಇಸ್ಲಾಮ್ ಎಂದರೆ ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ ಮತ್ತು ಮುಹಮ್ಮದ್(ಸ) ಅಲ್ಲಾಹನ ಸಂದೇಶವಾಹಕರು ಎಂದು ಸಾಕ್ಷ್ಯವಹಿಸುವುದು, ನಮಾಝ್ ಸಂಸ್ಥಾಪಿಸುವುದು, ಝಕಾತ್ ನೀಡುವುದು, ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸುವುದು ಮತ್ತು ಕಅಬಾಲಯಕ್ಕೆ ತಲುಪುವ ಸಾಮರ್ಥ್ಯವಿದ್ದರೆ ಕಅಬಾಲಯಕ್ಕೆ ತಲುಪಿ ಹಜ್ಜ್ ನಿರ್ವಹಿಸುವುದು.” ಆ ವ್ಯಕ್ತಿ ಹೇಳಿದರು: “ನೀವು ಹೇಳಿದ್ದು ಸತ್ಯ.” ಆ ವ್ಯಕ್ತಿ ಪ್ರಶ್ನೆ ಕೇಳಿ ನಂತರ ಅದನ್ನು ಸತ್ಯವೆಂದು ದೃಢೀಕರಿಸುವುದನ್ನು ನೋಡಿ ನಮಗೆ ಅಚ್ಚರಿಯಾಯಿತು! ಅವರು ಹೇಳಿದರು: “ನನಗೆ ಈಮಾನಿನ ಬಗ್ಗೆ ತಿಳಿಸಿಕೊಡಿ.” ಪ್ರವಾದಿ(ಸ) ರವರು ಉತ್ತರಿಸಿದರು: “ಈಮಾನ್ ಎಂದರೆ ಅಲ್ಲಾಹನಲ್ಲಿ, ಅವನ ಮಲಕ್ ಗಳಲ್ಲಿ (ದೇವದೂತರಲ್ಲಿ) , ಅವನ ಗ್ರಂಥಗಳಲ್ಲಿ, ಅವನ ಸಂದೇಶವಾಹಕರುಗಳಲ್ಲಿ, ಅಂತ್ಯದಿನದಲ್ಲಿ ಮತ್ತು ವಿಧಿಯಲ್ಲಿ — ಅದರ ಒಳಿತು ಮತ್ತು ಕೆಡುಕುಗಳಲ್ಲಿ — ವಿಶ್ವಾಸವಿಡುವುದು.” ಆ ವ್ಯಕ್ತಿ ಹೇಳಿದರು: “ನೀವು ಹೇಳಿದ್ದು ಸತ್ಯ.” ಆ ವ್ಯಕ್ತಿ ಹೇಳಿದರು: “ನನಗೆ ಇಹ್ಸಾನ್‌ನ ಬಗ್ಗೆ ತಿಳಿಸಿಕೊಡಿ.” ಪ್ರವಾದಿ(ಸ) ರವರು ಉತ್ತರಿಸಿದರು: “ಇಹ್ಸಾನ್ ಎಂದರೆ ನೀವು ಅಲ್ಲಾಹನನ್ನು ನೋಡುತ್ತಿರುವಂತೆ ಅವನನ್ನು ಆರಾಧಿಸುವುದು. ನೀವು ಅವನನ್ನು ನೋಡುವುದಿಲ್ಲವಾದರೂ ಅವನು ನಿಮ್ಮನ್ನು ನೋಡುತ್ತಿದ್ದಾನೆ.” ಆ ವ್ಯಕ್ತಿ ಹೇಳಿದರು: “ನನಗೆ ಅಂತ್ಯದಿನದ ಬಗ್ಗೆ ತಿಳಿಸಿಕೊಡಿ.” ಪ್ರವಾದಿ(ಸ) ರವರು ಉತ್ತರಿಸಿದರು: “ಅಂತ್ಯದಿನದ ಬಗ್ಗೆ ಪ್ರಶ್ನೆ ಕೇಳಲಾದವರಿಗೆ ಪ್ರಶ್ನೆ ಕೇಳಿದವರಿಗಿಂತಲೂ ಹೆಚ್ಚು ಜ್ಞಾನವಿಲ್ಲ.” ಆ ವ್ಯಕ್ತಿ ಹೇಳಿದರು: “ಹಾಗಾದರೆ, ನನಗೆ ಅದರ ಚಿಹ್ನೆಗಳ ಬಗ್ಗೆ ತಿಳಿಸಿಕೊಡಿ.” ಪ್ರವಾದಿ(ಸ) ರವರು ಹೇಳಿದರು: “ದಾಸಿ ತನ್ನ ಒಡತಿಗೆ ಜನ್ಮ ನೀಡುವುದು ಮತ್ತು ನಗ್ನ ಪಾದಗಳ ಹಾಗೂ ನಗ್ನ ದೇಹಗಳ ಬಡ ಕುರಿಗಾಹಿಗಳು ಗಗನಚುಂಬಿ ಕಟ್ಟಡಗಳನ್ನು ಕಟ್ಟುವುದರಲ್ಲಿ ಪರಸ್ಪರ ಅಹಂಭಾವಪಡುವುದು ಅದರ ಚಿಹ್ನೆಗಳಾಗಿವೆ.” ನಂತರ ಆ ವ್ಯಕ್ತಿ ಹೊರಟುಹೋದರು. ನಾನು ಪ್ರವಾದಿ(ಸ) ರವರ ಬಳಿ ಸ್ವಲ್ಪ ಹೊತ್ತು ಕುಳಿತುಕೊಂಡೆ. ನಂತರ ಪ್ರವಾದಿ(ಸ) ರವರು ಕೇಳಿದರು: “ಓ ಉಮರ್! ಪ್ರಶ್ನೆ ಕೇಳಿದ ವ್ಯಕ್ತಿ ಯಾರೆಂದು ತಮಗೆ ತಿಳಿದಿದೆಯೇ?” ನಾನು ಹೇಳಿದೆ: “ಅಲ್ಲಾಹು ಮತ್ತು ಅವನ ಸಂದೇಶವಾಹಕರೇ ಹೆಚ್ಚು ಬಲ್ಲವರು.” ಅವರು ಹೇಳಿದರು: “ಅವರು ಜಿಬ್ರೀಲ್(ಅ). ನಿಮಗೆ ನಿಮ್ಮ ಧರ್ಮವನ್ನು ಕಲಿಸಲು ನಿಮ್ಮ ಬಳಿಗೆ ಬಂದಿದ್ದರು.” [ಮುಸ್ಲಿಮ್].
ಹದೀಸಿನ ಪ್ರಯೋಜನಗಳು:

1- ಇಸ್ಲಾಂ ಧರ್ಮದ ಐದು ಸ್ತಂಭಗಳನ್ನು ಉಲ್ಲೇಖಿಸಲಾಗಿದೆ. ಅವು:
ಅಲ್ಲಾಹನ ಹೊರತು ಬೇರೆ ದೇವರು ಇಲ್ಲ ಮತ್ತು ಮುಹಮ್ಮದ್ ಅಲ್ಲಾಹನ ಸಂದೇಶವಾಹಕರು ಎಂಬ ಸಾಕ್ಷಿವಚನ.
ನಮಾಝನ್ನು ಸಂಸ್ಥಾಪಿಸುವುದು.
ಝಕಾತ್ ನೀಡುವುದು.
ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸುವುದು.
ಅಲ್ಲಾಹನ ಪವಿತ್ರ ಭವನಕ್ಕೆ ಹಜ್ಜ್ ನಿರ್ವಹಿಸುವುದು.
2- ಈಮಾನಿನ ಆರು ಸ್ತಂಭಗಳನ್ನು ಉಲ್ಲೇಖಿಸಲಾಗಿದೆ. ಅವು:
ಅಲ್ಲಾಹನಲ್ಲಿ ವಿಶ್ವಾಸವಿಡುವುದು.
ಅವನ ಮಲಕ್(ದೇವಚರ)ರಲ್ಲಿ ವಿಶ್ವಾಸವಿಡುವುದು.
ಅವನ ಗ್ರಂಥಗಳಲ್ಲಿ ವಿಶ್ವಾಸವಿಡುವುದು.
ಅವನ ಸಂದೇಶವಾಹಕರಲ್ಲಿ ವಿಶ್ವಾಸವಿಡುವುದು.
ಅಂತ್ಯ ದಿನದಲ್ಲಿ ವಿಶ್ವಾಸವಿಡುವುದು.
ವಿಧಿಯಲ್ಲಿ - ಅದರ ಒಳಿತು ಮತ್ತು ಕೆಡುಕುಗಳಲ್ಲಿ - ವಿಶ್ವಾಸವಿಡುವುದು.
3- ಇಹ್ಸಾನ್ ಬಗ್ಗೆ ಉಲ್ಲೇಖಿಸಲಾಗಿದೆ. ಇದಕ್ಕಿರುವುದು ಒಂದೇ ಸ್ತಂಭ. ಅಂದರೆ ನೀವು ಅಲ್ಲಾಹನನ್ನು ನೋಡುವಂತೆ ಅವನನ್ನು ಆರಾಧಿಸುವುದು. ನೀವು ಅವನನ್ನು ನೋಡದಿದ್ದರೂ ಅವನು ನಿಮ್ಮನ್ನು ನೋಡುತ್ತಿದ್ದಾನೆಂಬ ಪ್ರಜ್ಞೆಯನ್ನು ಹೊಂದಿರುವುದು.
4- ಅಂತ್ಯದಿನ ಸಂಭವಿಸುವ ಸಮಯದ ಬಗ್ಗೆ ಉಲ್ಲೇಖಿಸಲಾಗಿದೆ. ಅದು ಯಾವಾಗ ಎಂದು ಸರ್ವಶಕ್ತನಾದ ಅಲ್ಲಾಹುವಿಗೆ ಮಾತ್ರ ತಿಳಿದಿದೆ.
ನಾಲ್ಕನೇ ಹದೀಸ್:

ಉತ್ತರ: ಅಬು ಹುರೈರಾ رَضِيَ اللَّهُ عَنْهُ ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು ﷺ ಹೇಳುತ್ತಾರೆ: “ಅತ್ಯುತ್ತಮ ಗುಣನಡವಳಿಕೆಯನ್ನು ಹೊಂದಿರುವವರು ಯಾರೋ ಅವರೇ ಸಂಪೂರ್ಣ ಈಮಾನನ್ನು ಹೊಂದಿರುವ ವಿಶ್ವಾಸಿಗಳು." [ತಿರ್ಮಿದಿ. ಈ ಹದೀಸನ್ನು ಅವರು ಹಸನ್ ಸಹೀಹ್ ಎಂದಿದ್ದಾರೆ].
ಹದೀಸಿನ ಪ್ರಯೋಜನಗಳು:

1- ಉತ್ತಮ ನಡವಳಿಕೆಯನ್ನು ಪ್ರೋತ್ಸಾಹಿಸಲಾಗಿದೆ.
2- ಈಮಾನಿನ ಸಂಪೂರ್ಣತೆಯು ಗುಣನಡವಳಿಕೆಯ ಸಂಪೂರ್ಣತೆಯನ್ನು ಅವಲಂಬಿಸಿದೆ.
3- ಈಮಾನ್ (ವಿಶ್ವಾಸ) ಹೆಚ್ಚಾಗುತ್ತದೆ ಮತ್ತು ಕಡಿಮೆಯಾಗುತ್ತದೆ.
ಐದನೆಯ ಹದೀಸ್:

ಉತ್ತರ: ಇಬ್ನ್ ಉಮರ್ رَضِيَ اللَّهُ عَنْهُمَا ರಿಂದ ವರದಿ. ಪ್ರವಾದಿ ﷺ ಹೇಳಿದರು: “ಯಾರು ಅಲ್ಲಾಹು ಅಲ್ಲದವರ ಮೇಲೆ ಆಣೆ (ಪ್ರಮಾಣ) ಮಾಡುತ್ತಾನೋ; ಅವನು ಸತ್ಯನಿಷೇಧಿಯಾದನು ಅಥವಾ ಬಹುದೇವವಿಶ್ವಾಸಿಯಾದನು.” [ತಿರ್ಮಿದಿ]
ಹದೀಸಿನ ಪ್ರಯೋಜನಗಳು:
- ಅಲ್ಲಾಹನಲ್ಲದೆ ಇತರ ಯಾರ ಮೇಲೂ ಪ್ರಮಾಣ ಮಾಡಬಾರದು.
- ಅಲ್ಲಾಹು ಅಲ್ಲದವರ ಮೇಲೆ ಪ್ರಮಾಣ (ಆಣೆ) ಮಾಡುವುದು ಸಣ್ಣ ಶಿರ್ಕ್ ಆಗಿದೆ.
ಆರನೇ ಹದೀಸ್:

ಉತ್ತರ: ಅನಸ್ رَضِيَ اللَّهُ عَنْهُ ರಿಂದ ವರದಿ. ಅಲ್ಲಾಹನ ಸಂದೇಶವಾಹಕರು ﷺ ಹೇಳಿದರು: "ನಿಮ್ಮ ತಂದೆ-ತಾಯಿ, ಮಕ್ಕಳು ಮತ್ತು ಇತರೆಲ್ಲಾ ಜನರಿಗಿಂತ ಹೆಚ್ಚು ನಾನು ನಿಮಗೆ ಪ್ರಿಯನಾಗುವವರೆಗೂ ನಿಮ್ಮಲ್ಲಿ ಯಾರೂ ಸಂಪೂರ್ಣ ವಿಶ್ವಾಸಿಯಾಗಲಾರರು." [ಬುಖಾರಿ ಮತ್ತು ಮುಸ್ಲಿಂ]
ಹದೀಸಿನ ಪ್ರಯೋಜನಗಳು:
- ಪ್ರವಾದಿ ﷺ ರನ್ನು ಎಲ್ಲಾ ಜನರಿಗಿಂತ ಹೆಚ್ಚು ಪ್ರೀತಿಸಬೇಕು.
- ಅದು ಸತ್ಯವಿಶ್ವಾಸದ ಸಂಪೂರ್ಣತೆಯಾಗಿದೆ.
ಏಳನೇ ಹದೀಸ್:

ಉತ್ತರ: ಅನಸ್ رَضِيَ اللَّهُ عَنْهُ ರಿಂದ ವರದಿ. ಅಲ್ಲಾಹನ ಸಂದೇಶವಾಹಕರು ﷺ ಹೇಳಿದರು: “ತನಗಾಗಿ ಪ್ರೀತಿಸುವುದನ್ನು ತನ್ನ ಸಹೋದರನಿಗಾಗಿ ಪ್ರೀತಿಸುವವರೆಗೂ ನಿಮ್ಮ ಪೈಕಿ ಯಾರೂ ನೈಜ ಸತ್ಯವಿಶ್ವಾಸಿಯಾಗಲಾರರು." [ಬುಖಾರಿ ಮತ್ತು ಮುಸ್ಲಿಂ]
ಹದೀಸಿನ ಪ್ರಯೋಜನಗಳು:
1- ಸತ್ಯವಿಶ್ವಾಸಿ ತನಗಾಗಿ ಪ್ರೀತಿಸುವ ಒಳಿತುಗಳೆಲ್ಲವನ್ನೂ ಇತರ ಸತ್ಯವಿಶ್ವಾಸಿಗಳಿಗಾಗಿಯೂ ಪ್ರೀತಿಸಬೇಕು.
- ಅದು ಸತ್ಯವಿಶ್ವಾಸದ ಸಂಪೂರ್ಣತೆಯಾಗಿದೆ.
ಎಂಟನೇ ಹದೀಸ್:

ಉತ್ತರ: ಅಬೂ ಸಈದ್ رَضِيَ اللَّهُ عَنْهُ ರಿಂದ ವರದಿ, ಅಲ್ಲಾಹನ ಪ್ರವಾದಿ ﷺ ಹೇಳಿದ್ದಾರೆ: “ನನ್ನ ಆತ್ಮ ಯಾರ ಕೈಯಲ್ಲಿದೆಯೋ ಅವನ ಮೇಲಾಣೆ! ಇದು ಕುರ್‌ಆನ್‌ನ ಮೂರನೇ ಒಂದು ಭಾಗಕ್ಕೆ ಸಮಾನವಾಗಿದೆ.” [ಬುಖಾರಿ]
ಹದೀಸಿನ ಪ್ರಯೋಜನಗಳು:
1- ಸೂರ ಅಲ್-ಇಖ್ಲಾಸ್‌ನ ಶ್ರೇಷ್ಠತೆ.
2- ಅದು ಕುರ್‌ಆನ್‌ನ ಮೂರನೇ ಒಂದು ಭಾಗಕ್ಕೆ ಸಮಾನವಾಗಿದೆ.
ಒಂಬತ್ತನೇ ಹದೀಸ್:

ಉತ್ತರ- ಅಬೂ ಮೂಸಾ رَضِيَ اللَّهُ عَنْهُ ರಿಂದ ವರದಿ, ಅಲ್ಲಾಹನ ಪ್ರವಾದಿ ﷺ ಹೇಳಿದರು: "ಅಲ್ಲಾಹನಲ್ಲಿ ಹೊರತು ಯಾವುದೇ ಶಕ್ತಿ-ಸಾಮರ್ಥ್ಯ ಇಲ್ಲ - ಈ ವಚನವು ಸ್ವರ್ಗದ ನಿಧಿಗಳಲ್ಲಿ ಒಂದಾಗಿದೆ." [ಬುಖಾರಿ ಮತ್ತು ಮುಸ್ಲಿಂ]
ಹದೀಸಿನ ಪ್ರಯೋಜನಗಳು:
1- ಈ ವಚನದ ಶ್ರೇಷ್ಠತೆಯನ್ನು ಮತ್ತು ಇದು ಸ್ವರ್ಗದ ನಿಧಿಗಳಲ್ಲಿ ಒಂದಾಗಿದೆ ಎಂದು ತಿಳಿಸುತ್ತದೆ.
2- ಸತ್ಯವಿಶ್ವಾಸಿಯು ತನ್ನ ಶಕ್ತಿ-ಸಾಮರ್ಥ್ಯಗಳಿಂದ ಮುಕ್ತನಾಗಿ, ಸರ್ವಶಕ್ತನಾದ ಅಲ್ಲಾಹನನ್ನು ಮಾತ್ರ ಅವಲಂಬಿಸುತ್ತಾನೆ.
* ಹತ್ತನೇ ಹದೀಸ್:

ಉತ್ತರ: ನುಅಮಾನ್ ಬಿನ್ ಬಶೀರ್ رَضِيَ اللَّهُ عَنْهُما ರಿಂದ ವರದಿ. ಅಲ್ಲಾಹನ ಸಂದೇಶವಾಹಕರು ﷺ ಹೇಳುತ್ತಾರೆ: "ಖಂಡಿತವಾಗಿಯೂ ದೇಹದಲ್ಲಿ ಒಂದು ಮಾಂಸದ ಮುದ್ದೆಯಿದೆ. ಅದು ಸರಿಯಾದರೆ ಇಡೀ ದೇಹವು ಸರಿಯಾಗುತ್ತದೆ. ಅದು ಕೆಟ್ಟರೆ ಇಡೀ ದೇಹವು ಕೆಡುತ್ತದೆ. ತಿಳಿಯಿರಿ! ಅದು ಹೃದಯವಾಗಿದೆ." [ಬುಖಾರಿ ಮತ್ತು ಮುಸ್ಲಿಂ]
ಹದೀಸಿನ ಪ್ರಯೋಜನಗಳು:
1- ಹೃದಯವು ಸರಿಯಾದರೆ ಬಾಹ್ಯ ಮತ್ತು ಆಂತರ್ಯವು ಸರಿಯಾಗುತ್ತದೆ.
2- ಹೃದಯವು ಸರಿಯಾಗುವುದಕ್ಕೆ ಗಮನ ಕೊಡಬೇಕು. ಏಕೆಂದರೆ ಮಾನವನ ಸುಧಾರಣೆಯು ಅದನ್ನು ಅವಲಂಬಿಸಿಕೊಂಡಿದೆ.
* ಹನ್ನೊಂದನೇ ಹದೀಸ್:

ಉತ್ತರ: ಮುಆದ್ ಬಿನ್ ಜಬಲ್ رَضِيَ اللَّهُ عَنْهُ ರಿಂದ ವರದಿ. ಅಲ್ಲಾಹನ ಸಂದೇಶವಾಹಕರು ﷺ ಹೇಳಿದರು: “ಯಾರ ಕೊನೆಯ ಮಾತು ಲಾಇಲಾಹ ಇಲ್ಲಲ್ಲಾಹ್ (ಅಲ್ಲಾಹನ ಹೊರತು ಬೇರೆ ದೇವರಿಲ್ಲ) ಆಗುವುದೋ ಅವನು ಸ್ವರ್ಗವನ್ನು ಪ್ರವೇಶಿಸುವನು.” [ಅಬೂದಾವೂದ್].
ಹದೀಸಿನ ಪ್ರಯೋಜನಗಳು:

1- ಅಲ್ಲಾಹನ ಹೊರತು ಅನ್ಯ ದೇವರಿಲ್ಲ ಎಂಬ ಸಾಕ್ಷ್ಯವಚನದ ಶ್ರೇಷ್ಠತೆ ಮತ್ತು ಅದರ ಮೂಲಕ ಸತ್ಯವಿಶ್ವಾಸಿ ಸ್ವರ್ಗವನ್ನು ಪ್ರವೇಶಿಸುತ್ತಾನೆ ಎಂದು ಹೇಳಲಾಗಿದೆ.
2- ಇಹಲೋಕದಲ್ಲಿ ಯಾರ ಕೊನೆಯ ಮಾತುಗಳು ಅಲ್ಲಾಹನ ಹೊರತು ಅನ್ಯ ದೇವರಿಲ್ಲ ಎಂದಾಗುತ್ತದೋ ಎಂಬುದರ ಮಹತ್ವ ವಿವರಿಸಲಾಗಿದೆ.
* ಹನ್ನೆರಡನೇ ಹದೀಸ್:

ಉತ್ತರ: ಅಬ್ದುಲ್ಲಾ ಬಿನ್ ಮಸ್‌ಊದ್ رَضِيَ اللَّهُ عَنْهُ ರಿಂದ ವರದಿ. ಅಲ್ಲಾಹನ ಪ್ರವಾದಿ ﷺ ಹೇಳಿದರು: "ಸತ್ಯವಿಶ್ವಾಸಿಯು ದೂಷಿಸುವವನಲ್ಲ, ಶಪಿಸುವವನಲ್ಲ, ಅಶ್ಲೀಲವಾಗಿ ವರ್ತಿಸುವವನಲ್ಲ ಅಥವಾ ಅವಾಚ್ಯ ಶಬ್ದಗಳನ್ನು ಬಳಸುವವನಲ್ಲ." [ತಿರ್ಮಿದಿ]
ಹದೀಸಿನ ಕೆಲವು ಪ್ರಯೋಜನಗಳು:
1- ಎಲ್ಲಾ ಸುಳ್ಳು ಮತ್ತು ಕೆಟ್ಟ ಪದಗಳ ಬಳಕೆಯನ್ನು ವಿರೋಧಿಸಲಾಗಿದೆ.
- ಇದು ಸತ್ಯವಿಶ್ವಾಸಿಗಳು ಮಾತನಾಡುವ ವಿಧಾನವಾಗಿದೆ.
* ಹದಿಮೂರನೇ ಹದೀಸ್:

ಉತ್ತರ: ಅಬು ಹುರೈರಾ رَضِيَ اللَّهُ عَنْهُ ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು ﷺ ಹೇಳುತ್ತಾರೆ: "ತನಗೆ ಸಂಬಂಧಿಸದೇ ಇರುವುದನ್ನು ಬಿಟ್ಟುಬಿಡುವುದು ಒಬ್ಬ ಮುಸಲ್ಮಾನನ ಅತ್ಯುತ್ತಮ ಗುಣವಾಗಿದೆ." [ತಿರ್ಮಿದಿ ಮತ್ತಿತರರು ಈ ಹದೀಸನ್ನು ವರದಿ ಮಾಡಿದ್ದಾರೆ].
ಹದೀಸಿನ ಕೆಲವು ಪ್ರಯೋಜನಗಳು:

1- ಲೌಕಿಕ ಮತ್ತು ಧಾರ್ಮಿಕ ವಿಷಯಗಳಲ್ಲಿ ತನಗೆ ಸಂಬಂಧಿಸದೇ ಇರುವುದನ್ನು ಬಿಟ್ಟುಬಿಡುವುದು.
2- ತನಗೆ ಸಂಬಂಧಿಸದೇ ಇರುವುದನ್ನು ಬಿಟ್ಟುಬಿಡುವುದು ಇಸ್ಲಾಮಿನ ಸಂಪುರ್ಣತೆಯಾಗಿದೆ.
* ಹದಿನಾಲ್ಕನೇ ಹದೀಸ್:

ಉತ್ತರ: ಅಬ್ದುಲ್ಲಾ ಬಿನ್ ಮಸ್‌ಊದ್ رَضِيَ اللَّهُ عَنْهُ ರಿಂದ ವರದಿ. ಅಲ್ಲಾಹನ ಪ್ರವಾದಿ ﷺ ಹೇಳಿದರು: “ಯಾರು ಅಲ್ಲಾಹನ ಗ್ರಂಥದಿಂದ ಒಂದಕ್ಷರವನ್ನು ಓದುತ್ತಾರೋ, ಅದಕ್ಕೊಂದು ಪ್ರತಿಫಲವಿದೆ. ಪ್ರತಿಫಲವು ಅದರ ಹತ್ತರಷ್ಟು ದ್ವಿಗುಣವಾಗುತ್ತದೆ. ಅಲಿಫ್ ಲಾಮ್ ಮೀಮ್ ಇದು ಒಂದಕ್ಷರವಲ್ಲ, ಬದಲಾಗಿ ಅಲಿಫ್ ಒಂದು ಅಕ್ಷರ, ಲಾಮ್ ಒಂದು ಅಕ್ಷರ ಮತ್ತು ಮೀಮ್ ಒಂದು ಅಕ್ಷರ.” [ತಿರ್ಮಿದಿ]
ಹದೀಸಿನ ಪ್ರಯೋಜನಗಳು:
1- ಕುರ್‌ಆನ್ ಪಾರಾಯಣದ ಶ್ರೇಷ್ಠತೆ.
2- ನೀವು ಓದುವ ಪ್ರತಿಯೊಂದು ಅಕ್ಷರಕ್ಕೆ ಪ್ರತಿಫಲವಿದೆ.